Advertisement

ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

07:20 AM Sep 01, 2017 | |

ಮಡಿಕೇರಿ:  ನಾಪೋಕ್ಲು ಬಳಿಯ ಕಕ್ಕಬ್ಬೆಯ ನಟ್ಟುಮಾಡು ಶ್ರೀ ಭಗವತೀ ದೇವಸ್ಥಾನದ ಸ್ವಾಗತ ಕಮಾನಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ದನದ ನಾಲ್ಕು ಕಾಲುಗಳನ್ನು ಚೀಲವೊಂದರಲ್ಲಿ ನೇತು ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಹಾಗೂ ಹಿಂದೂ ಪರ ಸಂಘಟನೆಗಳ ಪ್ರಮುಖರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Advertisement

ನಟ್ಟುಮಾಡು ಶ್ರೀಭಗವತಿ ದೇವಸ್ಥಾನದ ಸ್ವಾಗತ ಕಮಾನಿನಲ್ಲಿ ಪ್ಲಾಸ್ಟಿಕ್‌ ಚೀಲ ಕಟ್ಟಿಕೊಂಡಿರುವುದನ್ನು ಬುಧವಾರ ಬೆಳಗ್ಗೆ ಗ್ರಾಮಸ್ಥರು ಗಮನಿಸಿ ಪರಿಶೀಲಿಸಿದಾಗ, ಅದರಲ್ಲಿ ದನದ ನಾಲ್ಕು ಕಾಲುಗಳು ಇರುವುದು ಕಂಡು ಬಂತು. ಈ ಬಗ್ಗೆ ನಾಪೋಕ್ಲು ಪೊಲೀಸರಿಗೆ ಮಾಹಿತಿಯನ್ನು ನೀಡಲಾಯಿತು.ಗ್ರಾಮಸ್ಥರು ದೇವಸ್ಥಾನದ ಬಳಿಯಲ್ಲೆ ನೆರೆದು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ದುಷ್ಕೃತ್ಯಕ್ಕೆ ಕಾರಣರಾದವರನ್ನು ಬಂಧಿಸುವಂತೆ ಒತ್ತಾಯಿಸಿದರು.

ಕಕ್ಕಬ್ಬೆ ಪೇಟೆಯ ಕೂಡು ರಸ್ತೆಯಲ್ಲಿ ಪ್ರತಿಭಟನ ಸಭೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಲಾಯಿತು. ಪ್ರಮುಖರು ಮಾತನಾಡಿ ಹಿಂದೂ  ಸಮುದಾಯದವರು ಎಲ್ಲರೊಂದಿಗೂ  ಅನ್ಯೋನ್ಯವಾಗಿದ್ದರೂ,  ಮತಾಂಧ  ಕಿಡಿಗೇಡಿಗಳಿಂದ ಅಶಾಂತಿಗೆ ಕಾರಣ ವಾಗುವ ಘಟನೆಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜದಲ್ಲಿ ಒಡಕು ಮೂಡಿಸಿ ವೈಷಮ್ಯ ಬಿತ್ತಲು ಯತ್ನಿಸುತ್ತಿರುವ ಸಮಾಜ ಘಾತುಕ ವ್ಯಕ್ತಿಗಳನ್ನು ತತ್‌ಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಹಬ್ಬಗಳ ಸಂದರ್ಭದಲ್ಲಿ ಕಿಡಿಗೇಡಿಗಳು ಹೀನ ಕೃತ್ಯಕ್ಕೆ ಮುಂದಾ ಗುತ್ತಿದ್ದು, ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಬಿ.ಎ. ಹರೀಶ್‌, ಜಿಲ್ಲಾ ಪಂಚಾಯತ್‌ ಸದಸ್ಯ ಪಾಡಿಯಮಂಡ ಮುರುಳಿ,  ನೆಲ್ಲಚಂಡ ಕಿರಣ್‌  ಕಾರ್ಯಪ್ಪ, ತಾ.ಪಂ. ಉಪಾಧ್ಯಕ್ಷ  ಬೊಳಿಯಾಡಿರ ಸಂತು  ಸುಬ್ರಮಣಿ, ಕಕ್ಕಬ್ಬೆ  ಕುಂಜಿಲ  ಗ್ರಾ.ಪಂ. ಅಧ್ಯಕ್ಷೆ ಕರ್ತಂಡ ಶೈಲಾ  ಕುಟ್ಟಪ್ಪ  ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next