ಹಾರೂಗೇರಿ: ಸಮರ್ಪಕ ವೇತನ ನೀಡುವಂತೆ ಆಗ್ರಹಿಸಿ ತಾತ್ಕಾಲಿಕ ಪೌರಕಾರ್ಮಿಕರು ಹಾರೂಗೇರಿ ಪುರಸಭೆಯ ಆವರಣದಲ್ಲಿ ಗುರುವಾರ ಧರಣಿ ಸತ್ಯಾಗ್ರಹ ನಡೆಸಿದರು. ಈ ಸಂದರ್ಭದಲ್ಲಿ ಪೌರಕಾರ್ಮಿಕ ನಾಗರಾಜ ಬಳ್ಳಾರಿ ಮಾತನಾಡಿ, ದಲಿತ ಸಮುದಾಯದ ಪೌರಕಾರ್ಮಿಕರನ್ನು ಸರ್ಕಾರ ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದೆ. ಕಾರ್ಮಿಕರೆಂದರೆ ಬಹಳ ಕೇವಲವಾಗಿ ನಡೆಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷದಿಂದ ಎಲ್ಲ ಪೌರಕಾರ್ಮಿಕರ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಸಮರ್ಪಕ ವೇತನ ಇಲ್ಲದೇ ಮಕ್ಕಳ ಶಾಲಾ ಫೀ ತುಂಬಿಲ್ಲ. ಅವರಿಗೆ ಪುಸ್ತಕಗಳನ್ನು ಕೊಡಿಸಲಾಗದೇ ಶಾಲೆಬಿಟ್ಟು ಮನೆಯಲ್ಲೇ ಉಳಿಯುವಂತಾಗಿದೆ.
ಶೀಘ್ರವೇ ಸಂಕಷ್ಟದಲ್ಲಿರುವ ತಾತ್ಕಾಲಿಕ ಪೌರಕಾರ್ಮಿಕರನ್ನು ಕಾಯಂಗೊಳಿಸಿ, ಬಾಕಿ ವೇತನ ಪಾವತಿಸದಿದ್ದಲ್ಲಿ, ಕುಟುಂಬ ಪರಿವಾರದೊಂದಿಗೆ ಆಮರಣಾಂತ ಉಪವಾಸ ಕೈಗೊಳ್ಳಲಾಗುವುದು. ಇಷ್ಟಕ್ಕೂ ಸರ್ಕಾರ ವೇತನ ಕೊಡದಿದ್ದಲ್ಲಿ ವಿಷ ಸೇವನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಮಧ್ಯಾಹ್ನದ ನಂತರ ಮುಖ್ಯಾಧಿಕಾರಿ
ಜಿ.ವಿ.ಹಣ್ಣಿಕೇರಿ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರವೀಣ ಬಾಗೇವಾಡಿ ಅವರೊಂದಿಗೆ
ಧರಣಿ ನಿರತರ ಜತೆ ದೂರವಾಣಿ ಮೂಲಕ ಮಾತನಾಡಿಸಿ, ಶುಕ್ರವಾರ ಜಿಲ್ಲಾ ಉಸ್ತುವಾರಿ ಹಾಗೂ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ನಂತರ ಧರಣಿಯನ್ನು ಹಿಂಪಡೆಯಲಾಯಿತು.
ಪುರಸಭೆ ಅಧ್ಯಕ್ಷೆ ಕಲಾವತಿ ನಡೋಣಿ, ಉಪಾಧ್ಯಕ್ಷ ಮುತ್ತಪ್ಪ ಗಸ್ತಿ ಧರಣಿ ನಿರತರಿಗೆ ಬೆಂಬಲ ಸೂಚಿಸಿದರು. ಧರಣಿಯಲ್ಲಿ ಪೌರ ಕಾರ್ಮಿಕರಾದ ಮಾರುತಿ ಸರಿಕರ, ನಾಗಪ್ಪ ಬಳ್ಳಾರಿ, ಸಂಬಾಜಿ ಕಾಂಬಳೆ, ಸದಾಶಿವ ತುಬಚಿ, ರಮೇಶ ಸರಿಕರ, ನರಸಿಂಹ ಬಳ್ಳಾರಿ, ಹಣಮಂತ ಕಾಂಬಳೆ, ಕಲ್ಲಪ್ಪ ಕುಳ್ಳೋಳ್ಳಿ, ಶ್ರಾವಣ ಕಣದಾಳ, ಅಣ್ಣಪ್ಪ ಕಾಂಬಳೆ, ಲಕ್ಷ್ಮವ್ವ ಮಾದರ, ಮಾಲವ್ವ ಮಾದರ, ಪಾರವ್ವ ಮಾದರ, ಭೀಮವ್ವ ಉಪ್ಪಾರ, ಲಕ್ಷ್ಮೀ ಬಳ್ಳಾರಿ, ಸುಶೀಲಾ ಹರಿಜನ, ಅರುಣ ಮಠದ, ಪ್ರಶಾಂತ ಬಡಿಗೇರ ಸೇರಿದಂತೆ ಇತರರು ಇದ್ದರು.