ಕಾರವಾರ: ಸಾಗರಮಾಲ ಯೋಜನೆಯಡಿ ಬೈತಖೋಲ್ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಕಾಮಗಾರಿ ವಿರೋಧಿಸಿ ಮೀನುಗಾರರ ಪ್ರತಿಭಟನೆ ಎರಡನೇ ದಿನವೂ ಮುಂದುವರಿಯಿತು.
ತಾಲೂಕಿನ ವಿವಿಧೆಡೆಯ ಮೀನು ಮಾರುಕಟ್ಟೆಗಳು ಬಂದ್ ಆಗಿದ್ದವು. ಇಲ್ಲಿನ ತಾತ್ಕಾಲಿಕ ಮೀನು ಮಾರುಕಟ್ಟೆ ಬಳಿ ನೂರಾರು ಮೀನುಗಾರರು ಹಾಗೂ ಮಹಿಳೆಯರು ಸಮಾವೇಶಗೊಂಡು ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಅಲೆತಡೆಗೋಡೆ ಕಾಮಗಾರಿ ಸ್ಥಗಿತಗೊಳಿಸುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಶಾಸಕಿ ರೂಪಾಲಿ ನಾಯ್ಕ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಸಂಸದರ ಅಣತಿಯಂತೆ ಶಾಸಕರು ಕೇಳುತ್ತಿದ್ದಾರೆ. ನಮ್ಮ ಪ್ರತಿಭಟನೆಗೆ ಅವರೂ ಬರಬೇಕಿತ್ತು ಎಂದು ಮೀನುಗಾರರ ಮಹಿಳಾ ಮುಖಂಡರು ಹೇಳಿದರು.
ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿದ ಪ್ರತಿಭಟನಾಕಾರರು, ಕಲ್ಲು ಲಾರಿಗಳನ್ನು ತೆಡೆದು ರಸ್ತೆ ಮಧ್ಯೆ ಕುಳಿತು ಕೆಲಕಾಲ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಸ್ಥಳೀಯ ಶಾಸಕರು ಮೀನುಗಾರರಿಗೆ ಅನ್ಯಾಯ ಮಾಡಿದ್ದಾರೆ. ಸಾಗರ ಮಾಲಾ ಯೋಜನೆ ಕೂಡಲೇ ಸ್ಥಗಿತಗೊಳಿಸಬೇಕು. ಇಲ್ಲವಾದರೆ ಅವರು ರಾಜೀನಾಮೆ ನೀಡಬೇಕು ಎಂದು ಮೀನುಗಾರ ಮಹಿಳಾ ಸಂಘಟನೆ ಮುಖ್ಯಸ್ಥೆ ಸುಶೀಲಾ ಹರಿಕಂತ್ರ ಒತ್ತಾಯಿಸಿದರು. ನಂತರ ಡಿಸಿ ಕಚೇರಿ ಎದುರು ಧರಣಿ ನಡೆಸಿದರು.
ಸಾಗರಮಾಲ ಯೋಜನೆಯಡಿ ಕಾರವಾರ ಬಂದರು ವಿಸ್ತರಣೆ ಕೈಗೊಳ್ಳಲಾಗುತ್ತಿದ್ದು, ಇದರ ಭಾಗವಾಗಿ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನವನದ ಬಳಿ ಬ್ರೇಕ್ ವಾಟರ್ ಕಾಮಗಾರಿ ನಡೆಯುವುದರಿಂದ ಮೀನುಗಾರಿಕೆಗೆತೊಂದರೆಯಾಗಲಿದೆ. ಕಡಲ ತೀರದ ಸೌಂದರ್ಯ ಹಾಳಾಗಲಿದೆ ಎಂಬುದು ಮೀನುಗಾರರ ಅಭಿಪ್ರಾಯವಾಗಿದೆ. ಸೀಬರ್ಡ್ ನೌಕಾನೆಲೆಗಾಗಿ ಕರಾವಳಿಯ 12 ತೀರಗಳನ್ನು ಕಳೆದುಕೊಳ್ಳಲಾಗಿದೆ. ಈಗಿರುವ ಏಕೈಕ ಟ್ಯಾಗೋರ್ ತೀರವನ್ನೂ ಕಳೆದುಕೊಳ್ಳಬಹುದು ಎಂಬ ಆತಂಕ ಮೀನುಗಾರರದ್ದಾಗಿದೆ.
ಸಹಿ ಅಭಿಯಾನ: ಕಾರವಾರ ಬಂದರು ವಿಸ್ತರಣೆ ಯೋಜನೆ ಕೈಬಿಟ್ಟು ಕಡಲತೀರ ಉಳಿಸಬೇಕು ಎಂದು ಕೇಂದ್ರ ಸರ್ಕಾರದ ಗಮನ ಸೆಳೆಯಲು ಆನ್‌ಲೈನ್ ಅಭಿಯಾನ ಕೂಡ ಪ್ರಾರಂಭವಾಗಿದೆ. ಇದಕ್ಕೆ ವಿದ್ಯಾರ್ಥಿಗಳು, ಪರಿಸರವಾದಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಜನರು ಈ ಚಳಿವಳಿಗೆ ಸಹಿ ಕೊಡ ಹಾಕಿತೊಡಗಿದ್ದಾರೆ.