ಬೀಳಗಿ: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಶೇ. 7.5 ಹೆಚ್ಚಿಸುವ ಮೂಲಕ ಪರಿಶಿಷ್ಟ ಪಂಗಡಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ವಾಲ್ಮೀಕಿ-ನಾಯಕ ಮಹಾಸಭಾ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದವರು ಶುಕ್ರವಾರ ಪಟ್ಟಣದಲ್ಲಿ ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ| ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಾಲ್ಮೀಕಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಅಂಟಿನ, ಸಮಾಜಕ್ಕೆ ಮೊದಲು ನೀಡುತ್ತಿದ್ದ ಶೇ.3 ಮಿಸಲಾತಿಯಿಂದ ನೇಮಕಾತಿ ಮತ್ತು ಬಡ್ತಿಗಳಲ್ಲಿ
ಅನ್ಯಾಯವಾಗುತ್ತಿದೆ. ಕಾರಣ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ,7.5 ಕ್ಕೆ ಹೆಚ್ಚಿಸಬೇಕು. ಈ ಕುರಿತು ಸಮಾಜ ಬಾಂಧವರು ಸರಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟ ವರ್ಗದ ಪಟ್ಟಿಯಲ್ಲಿರುವ ಹೆಸರು ಬಳಸಿಕೊಂಡು ಅಸಂವಿಧಾನಿಕವಾಗಿ ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆಯುವ ಕೆಲವರು ಪರಿಶಿಷ್ಟ ವರ್ಗದವರಿಗೆ ಮೀಸಲಿರುವ ಸೌಲಭ್ಯ ಪಡೆಯುತ್ತಿರುವುದು ಸಮುದಾಯದ ಗಮನಕ್ಕೆ ಬಂದಿದೆ. ಕೂಡಲೇ ರಾಜ್ಯ ಸರ್ಕಾರ ಅರ್ಹರಲ್ಲದವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವುದನ್ನು ತಡೆಗಟ್ಟಬೇಕು. ಜತೆಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಪರಿಶಿಷ್ಟ ವರ್ಗದ ಸಚಿವಾಲಯ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಗುರುಗಳಾದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ರಾಜನಹಳ್ಳಿ ಗುರುಪೀಠದಿಂದ ಬೆಂಗಳೂರ ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಜೂ. 25ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಮಾಡಲಾಗಿದ್ದು, ಸಮುದಾಯದ 14 ಜನ ಶಾಸಕರು, ಇಬ್ಬರು ಸಂಸದರು ಗಮನ ಹರಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ವಾಲ್ಮೀಕಿ-ನಾಯಕ ಮಹಾಸಭಾ ತಾಲೂಕಾಧ್ಯಕ್ಷ ಸುರೇಂದ್ರ ನಾಯಿಕ, ಹುಚ್ಚಪ್ಪ ಕೌಲಗಿ, ಈರಣ್ಣ ಜಡಗನ್ನವರ, ಪಡಿಯಪ್ಪ ವಾಬನ್ನವರ, ಲಕ್ಷ್ಮಣ ಕೌಲಗಿ, ರಮೇಶ ಜಾನಮಟ್ಟಿ, ಲಕ್ಷ್ಮಣ ಶಿರುಗುಪ್ಪಿ, ಸೋಮನಗೌಡ ಪಾಟೀಲ, ಮುತ್ತು ಹಲಗಲಿ, ಸದಾಶಿವ ಜುಂಜುರೆ, ಹನುಮಂತ ಕಟ್ಟೆಪ್ಪನವರ, ಬಾಳು ಕಂಠಿ, ಕೂಗಟಿ ಇದ್ದರು.