ಕಲಬುರಗಿ: ನಗರದಲ್ಲಿ ಬಾರ್ ಅಸೋಸಿಯೇಷನ್ ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಗುಲಬರ್ಗಾ ನ್ಯಾಯವಾದಿಗಳ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ದೇಶದ ಎಲ್ಲ ಭಾಗಗಳಲ್ಲಿ ಬಾರ್ ಅಸೋಸಿಯೇಷನ್‌ಗಳಿಗೆ ಇರುವಂತೆ ನಗದರಲ್ಲೂ ಸುಸಜ್ಜಿತವಾದ ಕಟ್ಟಡ ನಿರ್ಮಿಸಬೇಕು. ಗ್ರಂಥಾಲಯ, ಇ-ಗ್ರಂಥಾಲಯ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ಒಳಗೊಂಡು ಕಟ್ಟಡ ಕಟ್ಟಿಸಿಕೊಡಬೇಕು. ವಕೀಲರು ಮತ್ತು ಕುಟುಂಬಸ್ಥರಿಗೆ ಜೀವ ವಿಮೆ ಒದಗಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ವಕೀಲರಿಗಾಗಿ ಮೀಸಲಿಟ್ಟಿರುವ 5,000 ಸಾವಿರ ಕೋಟಿ ರೂ.ಗಳ ಅನುದಾನವನ್ನು ವಕೀಲರ ಕಲ್ಯಾಣಕ್ಕಾಗಿ ಬಳಕೆ ಮಾಡಬೇಕು. ಅಕಾಲಿಕ ನಿಧನ, ಯಾವುದೇ ಕಾಯಿಲೆ, ಅಪಘಾತಗಳ ಸಂದರ್ಭದಲ್ಲಿ ಮೃತಪಡುವ ವಕೀಲರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಹರಿಯಾಣ ಸರ್ಕಾರದ ಮಾದರಿಯಲ್ಲಿ ವಕೀಲರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಯೋಜನೆಯೊಂದನ್ನು ಜಾರಿಗೆ ತರಬೇಕು. ಕಾನೂನು ಸೇವಾ ಪ್ರಾಧಿಕಾರ ತಿದ್ದುಪತಿ ತಂದು ಪ್ರಾಧಿಕಾರದಲ್ಲಿ ವಕೀಲರಿಗೂ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ವಿವಿಧ ಆಯೋಗಗಳು, ಟ್ರಿಬ್ಯುನಲ್, ಪ್ರಾಧಿಕಾರಗಳಿಗೆ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳ ನೇಮಕದ ಮಾದರಿಯಲ್ಲಿ ವಕೀಲರನ್ನು ನೇಮಿಸಬೇಕೆಂದು ಆಗ್ರಹಿಸಿದರು.
ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ, ಉಪಾಧ್ಯಕ್ಷ ಸತೀಶ ಪಾಟೀಲ, ವೈಜನಾಥ ಝಳಕಿ, ಬಿ.ಎನ್. ಪಾಟೀಲ, ಅಮರೇಶ ಜಿ., ಪ್ರಶಾಂತ ಪಾಟೀಲ ಹಾಗೂ ಮತ್ತಿತರ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಲಬರಗಿ: ಬಾರ್ ಅಸೋಸಿಯೇಷನ್ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ವಕೀಲರು ಪ್ರತಿಭಟನೆ ನಡೆಸಿದರು.