ಶಿವಮೊಗ್ಗ: ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಸಾವಿಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಗೆ ಕರ್ತವ್ಯ ಒತ್ತಡ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ| ನಾಗೇಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಸಿಇಒ ಪ್ರಶಾಂತ್ ಮಿಶ್ರಾ ಅವರ ಒತ್ತಡವೇ ಇದಕ್ಕೆ ಕಾರಣ. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತ ವೈದ್ಯರು ಒತ್ತಾಯಿಸಿದರು. ಕೋವಿಡ್ ನಿಯಂತ್ರಣಕ್ಕೆ ವೈದ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮ ವಹಿಸುತ್ತಿದ್ದಾರೆ. ಆದರೆ ಕಾರ್ಯದ ಒತ್ತಡ ಹೆಚ್ಚಾಗುತ್ತಿದೆ. ಪ್ರತಿದಿನ ಐದರಿಂದ ಆರು ವೆಬ್ ಪೋರ್ಟಲ್‌ಗಳಿಗೆ ಡೇಟಾ ಎಂಟ್ರಿ ಮಾಡಬೇಕಿದೆ. ವರದಿಗೆ ಸಂಬಂಧಿಸಿದಂತೆ ನಿರಂತರ ಫೋನ್ ಕರೆಗಳನ್ನು ಸ್ವೀಕರಿಸಬೇಕಿದೆ. ಆದ್ದರಿಂದ ಕೋವಿಡ್- 19 ವಿವರವನ್ನು ಕಂಪ್ಯೂಟರಲ್ಲಿ ನಮೂದಿಸುವುದನ್ನು ಸರಳಗೊಳಿಸಬೇಕು ಎಂದು ವೈದ್ಯರು ಒತ್ತಾಯಿಸಿದರು. ಮತ್ತೂಂದೆಡೆ ಕೋವಿಡ್ ಪರೀಕ್ಷೆ ವಿಚಾರದಲ್ಲಿ ಭಾರೀ ಒತ್ತಡ ಹೇರಲಾಗುತ್ತಿದೆ. ಪ್ರತಿದಿನ ಎರಡು ಸಾವಿರದಿಂದ ಮೂರು ಸಾವಿರ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ಒತ್ತಡ ಹೇರಲಾಗುತ್ತಿದೆ. ಇವುಗಳಿಂದ ಆರೋಗ್ಯ ಇಲಾಖೆ ಅ ಧಿಕಾರಿಗಳು, ವೈದ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.
ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಆಗ್ರಹ : ಸರ್ಕಾರ ತಕ್ಷಣ ಆರೋಗ್ಯ ಇಲಾಖೆ ಬೇರೆ ಇಲಾಖೆಯವರ ಆದೇಶಗಳ ಅಡಿಯಾಗಿ ಕೆಲಸ ಮಾಡುವ ವ್ಯವಸ್ಥೆಗೆ ಕೊನೆ ಹಾಡಬೇಕು. ಅವರು ಮುಕ್ತವಾಗಿ ಕೆಲಸ ಮಾಡುವಂತಾಗಬೇಕು. ಇಂತಹ ವಾತಾವರಣ ಸೃಷ್ಟಿಸಲು ಅಗತ್ಯವಾದ ನಿಯಮಗಳನ್ನು ರೂಪಿಸಿ ಸರ್ಕಾರ ಸುತ್ತೋಲೆ ಹೊರಡಿಸಬೇಕು. ನಿಧನ ಹೊಂದಿರುವ ಆರೋಗ್ಯ ಇಲಾಖೆಯ ವೈದ್ಯ ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಕಾರಣವಾಗಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ಅಧಿಕಾರಿ ನೌಕರರ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಮ.ಸ.ನಂಜುಂಡಸ್ವಾಮಿ ಮಾತನಾಡಿ, ನಂಜನಗೂಡಿನ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಲ್ಬರ್ಗ ಜಿಲ್ಲೆಯ ವೈದ್ಯಕೀಯ ಪ್ರಯೋಗಾಲಯದ ಟೆಕ್ನಾಲಜಿಸ್ಟ್ ಅಜೀಂ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಅಧಿಕಾರಿ ಶಂಕರ್ ಹಾಗೂ ಬೀದರ್ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಅಧಿಕಾರಿಗಳ ಮೇಲೆ ಅಲ್ಲಿನ ಜಿಲ್ಲಾಧಿಕಾರಿಗಳು ನಡೆಸಿರುವ ದೌರ್ಜನ್ಯ ಎಲ್ಲವೂ ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದರು. ದರ್ಪ ತೋರಿಸುವ ಐಎಎಸ್, ಐಪಿಎಸ್ ಅಧಿಕಾರಿಗಳು ಒಂದು ಗಂಟೆ ಪಿಪಿಇ ಕಿಟ್ ಧರಿಸಿಕೊಂಡು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದರೆ ಗಂಟೆಗೆ 25 ಸಾವಿರ ರೂಪಾಯಿ ಸಂಬಳ ತಾವು ಕೊಡುತ್ತೇವೆ ಎಂದು ಸವಾಲು ಹಾಕಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಜಿ. ಪರಮೇಶ್ವರ್, ತಾಲೂಕು ಆರೋಗ್ಯಾಧಿಕಾರಿ ಡಾ| ಮೋಹನ್ ಕೆ.ಎಸ್., ಸಿವಿಲ್ ಸರ್ಜನ್ ಡಾ|ಪ್ರಕಾಶ್ ಬೋಸ್ಲೆ ಕೆ.ಆರ್., ಜಿಲ್ಲಾ ವೈದ್ಯಾಧಿಕಾರಿಗಳ ಸಂಘದ ಡಾ| ನಾಗೇಂದ್ರಪ್ಪ ಮಾತನಾಡಿದರು. ಪ್ರತಿಭಟನೆಯಲ್ಲಿ ಡಾ| ಪರಪ್ಪ, ಡಾ| ಹರೀಶ್, ಡಾ| ಸುಮಾ, ಡಾ| ಜಯಲಕ್ಷ್ಮೀ ನಾಯಕ್, ಪ್ರಮುಖರಾದ ಸುರೇಶ್ ಎ., ವಿನಯಕುಮಾರ್, ರಾಜು ಈಳಿಗೇರ್, ಸುಜಾತ, ಭಾರತಿ, ಮಂಜುನಾಥ್, ಲತಾ, ಸುನೀಲ್ ಕುಮಾರ್, ಶ್ರೀನಿವಾಸ್, ಜುಬೇದಾ ಎಂ. ಅಲಿ ಇನ್ನಿತರರು ಇದ್ದರು.