Advertisement

ಟಿಕೆಟ್‌ ವಂಚಿತರ ಬೆಂಬಲಿಗರಿಂದ ಪ್ರತಿಭಟನೆ

12:47 PM Apr 18, 2018 | Team Udayavani |

ಮೈಸೂರು: ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ವಂಚಿತ ಶಾಸಕ ತಿಪ್ಪೇಸ್ವಾಮಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡುವಂತೆ ಮನವಿ ಮಾಡಿದರಲ್ಲದೆ, ಕಾಂಗ್ರೆಸ್‌ ಟಿಕೆಟ್‌ ವಂಚಿತ ಶಾಸಕರ ಬೆಂಬಲಿಗರಿಂದ ಮೈಸೂರಿನ ಸಿಎಂ ನಿವಾಸದೆದುರೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. 

Advertisement

 ಹಾಲಿ ಶಾಸಕ ತಮಗೆ ಟಿಕೆಟ್‌ ನೀಡದೆ, ಬಳ್ಳಾರಿ ಸಂಸದ ಬಿ.ಶ್ರೀರಾಮುಲುಗೆ ಬಿಜೆಪಿ ಟಿಕೆಟ್‌ ನೀಡಿರುವುದರಿಂದ ಆಕ್ರೋಶಗೊಂಡಿರುವ ಶಾಸಕ ತಿಪ್ಪೇಸ್ವಾಮಿ, ಸೋಮವಾರ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡಿದ್ದರು. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ನೀಡುವಂತೆ ಮನವಿ ಮಾಡಿದರು. 

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಿಪ್ಪೇಸ್ವಾಮಿ ತಡವಾಗಿ ಬಂದಿದ್ದಾರೆ. ತಿಪ್ಪೇಸ್ವಾಮಿ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿಲ್ಲ. ಕಾಂಗ್ರೆಸ್‌ ಪಕ್ಷ ಈಗಾಗಲೇ ಅಲ್ಲಿನ ಅಭ್ಯರ್ಥಿಯನ್ನು ಘೋಷಣೆ ಮಾಡಿ ಆಗಿದೆ. ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ಅಸಮಾಧಾನಗೊಂಡಿರುವುದು ನಿಜ. ಆದರೆ, ಅವರು ಪಕ್ಷ ಬಿಡುವುದಿಲ್ಲ. ಟಿಕೆಟ್‌ ವಂಚಿತರ ಬೆಂಬಲಿಗರು ಪ್ರತಿಭಟನೆ ಮಾಡುವುದು, ಧಿಕ್ಕಾರ ಕೂಗುವುದೆಲ್ಲಾ ಸಹಜ. ಮನೋಹರ್‌ ತಹಶೀಲ್ದಾರ್‌ ಬೆಂಬಲಿಗರು ಇಲ್ಲಿ ಬಂದು ಪ್ರತಿಭಟನೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇದೆಲ್ಲಾ ಸಾಮಾನ್ಯ.

ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸುತ್ತೇವೆ. ಇದರಿಂದ ಚುನಾವಣೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು. ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವವರು ಹಾಗೂ ಬಂಡಾಯ ಎದ್ದಿರುವವರ ಜತೆಗೆ ಮಾತುಕತೆ ನಡೆಸಿ ಸಮಾಧಾನ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದಾರಾಮಯ್ಯ ತಿಳಿಸಿದರು.

Advertisement

ಪ್ರತಿಭಟನೆ: ಟಿಕೆಟ್‌ ವಂಚಿತ ಹಾನಗಲ್‌ ಶಾಸಕ ಮನೋಹರ್‌ ತಹಶೀಲ್ದಾರ್‌ ಬೆಂಬಲಿಗರು ಜಿಪಂ ಸದಸ್ಯ ಕಲ್ಲೇರಿ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಬೆಂಬಲಿಗರು ಮೈಸೂರಿಗೆ ಆಗಮಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ಹಾಲಿ ಶಾಸಕ ಮನೋಹರ್‌ ತಹಶೀಲ್ದಾರ್‌ಗೆ ಟಿಕೆಟ್‌ ಕೊಡಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲು ಮುಂದಾದ ಬೆಂಬಲಿಗರಿಗೆ ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ತಹಶೀಲ್ದಾರ್‌ ಬೆಂಬಲಿಗರು ಮುಖ್ಯಮಂತ್ರಿಯವರಿಗೆ ಘೇರಾವ್‌ ಹಾಕಲು ಯತ್ನಿಸಿದರು.

ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾನಿರತ ತಹಶೀಲ್ದಾರ್‌ ಬೆಂಬಲಿಗರನ್ನು ಚದುರಿಸಲು ಮುಂದಾದಾಗ ರಸ್ತೆಯಲ್ಲೇ ಮಲಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಿರಗುಪ್ಪ ಶಾಸಕ ಬಿ.ಎಂ.ನಾಗರಾಜ್‌ ಬೆಂಬಲಿಗರು ಸಿದ್ದರಾಮಯ್ಯ ನಿವಾಸದ ಎದುರು ಬಿ.ಎಂ.ನಾಗರಾಜ್‌ ಭಾವಚಿತ್ರ ಹಿಡಿದು, ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next