Advertisement

ಕೈ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯದ ಬಿಸಿ

06:20 AM Apr 16, 2018 | |

ಬೆಂಗಳೂರು: ಮ್ಯಾರಥಾನ್‌ ಸಭೆಗಳ ನಂತರ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನವೂ ನ್ಪೋಟಗೊಂಡಿದ್ದು, ಟಿಕೆಟ್‌ ಕೈತಪ್ಪಿದ ಆಕಾಂಕ್ಷಿಗಳ ಬೆಂಬಲಿಗರು ಪಕ್ಷ ಹಾಗೂ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಶಾಸಕ ಶ್ರೀನಿವಾಸ್‌ಗೆ ಟಿಕೆಟ್‌ ಕೈ ತಪ್ಪುತ್ತದೆ ಎಂದು ತಿಳಿದ ಕೂಡಲೇ ಅವರ ಬೆಂಬಲಿಗರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ತಮಗೆ ಅನ್ಯಾಯವಾಗಿದೆ ಎಂದು ಶಾಸಕ ಶ್ರೀನಿವಾಸ್‌ ಪತ್ನಿ ಕಣ್ಣೀರು ಹಾಕಿದರು. ಹಾನಗಲ್‌ ಕ್ಷೇತ್ರದ ಹಾಲಿ ಶಾಸಕ ಮನೋಹರ್‌ ತಹಸೀಲ್ದಾರ್‌ ಅವರ ಬದಲಿಗೆ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ್‌ ಮಾನೆಗೆ ಟಿಕೆಟ್‌ ನೀಡಲಾಗಿದ್ದು, ಇದನ್ನು ಖಂಡಿಸಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಅಲ್ಲದೆ, ಸೋಮವಾರ ಹಾನಗಲ್‌ ಬಂದ್‌ಗೆ ಕರೆ ನೀಡಿದ್ದಾರೆ.

ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ಮಾಜಿ ಸದಸ್ಯೆ ಗಾಯತ್ರಿ ಶಾಂತವೀರೇಗೌಡ ಅವರ ಬೆಂಬಲಿಗರು ಆಝಾದ್‌ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಎಚ್‌.ಜಿ.ರಾಜೇಶ್‌ಗೂ ಟಿಕೆಟ್‌ ಕೈ ತಪ್ಪಿದೆ ಎಂಬ ಮಾಹಿತಿ ದೊರೆತ ತಕ್ಷಣ ಅವರ ಬೆಂಬಲಿಗರು ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರನ್ನು ಭೇಟಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಕೋಲಾರದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಜಮೀರ್‌ ಪಾಷಾಗೆ ಟಿಕೆಟ್‌ ನೀಡಿದ್ದು,ಇದರಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿ.ಆರ್‌. ಸುದರ್ಶನ್‌ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ಪಕ್ಷೇತರ ಶಾಸಕರಾಗಿದ್ದ ಸುಬ್ಟಾರೆಡ್ಡಿಗೆ ಟಿಕೆಟ್‌ ನೀಡಿದ್ದರಿಂದ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎನ್‌. ಸಂಪಗಿ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ.

Advertisement

ನನಗೇ ಟಿಕೆಟ್‌ ನೀಡಿ: ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿದ ತಕ್ಷಣ ಹಾಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರು ಪಕ್ಷದ ಕಾರ್ಯಾಧ್ಯಕ್ಷ ಎಸ್‌.ಆರ್‌.ಪಾಟೀಲ್‌ ಅವರನ್ನು ಭೇಟಿ ಮಾಡಿ, ತಮ್ಮ ಬದಲಿಗೆ ಬೇರೆಯವರಿಗೆ ಟಿಕೆಟ್‌ ನೀಡಿದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್‌ ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿ.ಬಿ.ರಾಮಸ್ವಾಮಿಗೌಡರಿಗೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಟಿಕೆಟ್‌ ಕೈ ತಪ್ಪಲು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ, ರಾಮಸ್ವಾಮಿಗೌಡರ ಅಭಿಮಾನಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕಿತ್ತೂರಿನಲ್ಲೂ ಪ್ರತಿಭಟನೆ
ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಡಿ.ಬಿ.ಇನಾಂದಾರ್‌ಗೆ ಟಿಕೆಟ್‌ ತಪ್ಪಿಸುವ ಪ್ರಯತ್ನ ನಡೆದಿದ್ದು, ಇಲ್ಲೂ ಹಾಲಿ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಒತ್ತಡಕ್ಕೆ ಮಣಿದು ಇನಾಂದಾರ್‌ ಸಂಬಂಧಿ ಬಾಬಾಸಾಹೇಬ್‌ಗ ಟಿಕೆಟ್‌ ಕೊಡಿಸುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಕಿತ್ತೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಇದರಿಂದಾಗಿ ಭಾನುವಾರ ಹೆಸರು ಘೋಷಣೆ ಮಾಡಿಲ್ಲ.

ಕ್ಷೇತ್ರದಲ್ಲಿ ಸ್ಥಳೀಯವಾಗಿ ಪಕ್ಷ ಸಂಘಟಿಸಿದವರನ್ನು ಗುರುತಿಸಿ ಟಿಕೆಟ್‌ ನೀಡುವುದಾಗಿ ಕಾಂಗ್ರೆಸ್‌ ಹೈಕಮಾಂಡ್‌ ಹೇಳಿತ್ತು. ಹೈಕಮಾಂಡ್‌ ನಡೆದಿಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ನನಗೆ ದ್ರೋಹ ಮಾಡಲಾಗಿದೆ. ಏ.17ರ ಸಭೆಯಲ್ಲಿ
ಬೆಂಬಲಿಗರೊಂದಿಗೆ ಚರ್ಚಿಸಿ ನನ್ನ ಮುಂದಿನ ನಡೆ ಬಗ್ಗೆ ನಿರ್ಧರಿಸುತ್ತೇನೆ.

– ಚಂದ್ರಾಸಿಂಗ್‌, ಬೀದರ ದಕ್ಷಿಣ ಕ್ಷೇತ್ರ ಟಿಕೆಟ್‌ ವಂಚಿತ

Advertisement

Udayavani is now on Telegram. Click here to join our channel and stay updated with the latest news.

Next