Advertisement

ಆರ್‌ಕೆಎಸ್‌ ರೈತ ಸಂಘಟನೆಯಿಂದ ಪ್ರತಿಭಟನೆ

09:47 AM Feb 06, 2022 | Team Udayavani |

ವಾಡಿ: ಗ್ರಾಮೀಣ ಭಾಗಗಳಲ್ಲಿ ಬಡ ಜನರು ಕುಟುಂಬ ನಿರ್ವಹಣೆ ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಉದ್ಯೋಗ ಅರಸಿ ನಗರಗಳಿಗೆ ಗುಳೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ಎಚ್ಚೆತ್ತು ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್‌) ಕಾರ್ಯಕರ್ತರು ಹಳಕರ್ಟಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು.

Advertisement

ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ 150 ದಿನಗಳ ಕೆಲಸ ಖಾತ್ರಿಪಡಿಸಬೇಕು. ಫೆಬ್ರವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಕಡ್ಡಾಯವಾಗಿ ಕೆಲಸ ನೀಡಲೇಬೇಕು ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಆಲ್‌ ಇಂಡಿಯಾ ಕಿಸಾನ್‌ ಖೇತ್‌ ಮಜ್ದೂರ್‌ ಸಂಘಟನೆ (ಎಐಕೆಕೆಎಂಎಸ್‌) ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ, ಕೊರೊನಾ ದಾಳಿ ಸಂದರ್ಭದಲ್ಲಿ ಗ್ರಾಮೀಣ ಭಾರತವು ಆರ್ಥಿಕವಾಗಿ ನಲುಗಿ ಜರ್ಜರಿತವಾಗಿದೆ. ಜೀವನಾವಶ್ಯಕ ವಸ್ತುಗಳೆಲ್ಲ ದುಬಾರಿಯಾಗುತ್ತಿವೆ. ಬಡಜನರು ದುಡಿದ ಅರ್ಧಕ್ಕಿಂತ ಹೆಚ್ಚು ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಕಂದಾಯ ಕಟ್ಟುವಂತಾಗಿದೆ. ಬಡತನವು ಶಾಪದಂತೆ ಅವರನ್ನು ಕಿತ್ತು ತಿನ್ನುತ್ತಿದೆ. ಕ್ರೂರವಾದ ಹಸಿವಿನ ಹಾಹಾಕಾರದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಗ್ರಾಮೀಣ ರೈತರು ಮತ್ತು ಹಳ್ಳಿಯ ಬಡಜನತೆಯನ್ನು ರಕ್ಷಿಸುವ ಮತ್ತು ಅವರಿಗೆ ಆರ್ಥಿಕ ಭದ್ರತೆ ನೀಡುವ ಕೆಲಸ ಸರ್ಕಾರದಿಂದ ತುರ್ತಾಗಿ ನಡೆಯಬೇಕು. ಆದರೆ ಜನಪ್ರತಿನಿಧಿಗಳು ಜನರ ಜೀವನ ದುಸ್ಥಿತಿಗೆ ಕಿಂಚಿತ್ತೂ ಮರುಗುತ್ತಿಲ್ಲ ಎಂದು ಆಪಾದಿಸಿದರು.

ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅವರಿಗೆ ಆರ್ಥಿಕಭದ್ರತೆ ಒದಗಿಸುತ್ತಿದ್ದು, ವಲಸೆ ಹೋಗುವುದನ್ನು ತಪ್ಪಿಸಲು ಸಹ ಈ ಯೋಜನೆ ಸಹಾಯಕವಾಗಿದೆ. ಆದ್ದರಿಂದ, ಕೃಷಿ ಅವಧಿ ಹೊರತುಪಡಿಸಿ ಉಳಿದ ದಿನಗಳಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಆಶಯದಂತೆ 150 ದಿನಗಳ ಉದ್ಯೋಗ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದ ಮಹೇಶ ಎಸ್‌.ಬಿ, ಸರಿಯಾದ ಯೋಜನೆ ಕೊರತೆಯಿಂದಲೇ ವಾರ್ಷಿಕ ದಿನಗಳ ಕನಿಷ್ಟ ಕೆಲಸವೂ ಖಾತ್ರಿಯಾಗದೇ ಜನರು ಕಂಗೆಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಯಶಸ್ವಿ ಮಾಡಲು ಬೇಕಾದ ಸರಿಯಾದ ಮತ್ತು ಸಮರ್ಪಕವಾದ ಯೋಜನೆಗಳನ್ನು ಹಾಕಿಕೊಳ್ಳುವಲ್ಲಿ ಪಂಚಾಯಿತಿ ಆಡಳಿತಗಳು ವಿಫಲವಾಗಿವೆ ಎಂದು ದೂರಿದರು.

ಆರ್‌ಕೆಎಸ್‌ ಜಿಲ್ಲಾ ಉಪಾಧ್ಯಕ್ಷ ಗುಂಡಣ್ಣ ಕುಂಬಾರ, ಹಳಕರ್ಟಿ ಗ್ರಾಮ ಸಮಿತಿ ಅಧ್ಯಕ್ಷ ಚೌಡಪ್ಪ ಗಂಜಿ, ಕಾರ್ಯದರ್ಶಿ ಶಿವುಕುಮಾರ ಆಂದೋಲಾ, ಮುಖಂಡರಾದ ವೀರೇಶ ನಾಲವಾರ, ದೊಡ್ಡಪ್ಪ ಹೊಸೂರ, ಸಾಬಣ್ಣ ಸುಣಗಾರ, ಅಯ್ಯಪ್ಪ ಹುಳಗೋಳ, ಶಿವಯೋಗಿ ಹೊಸೂರ, ನಾಗರಾಜ ಅಕ್ಕಿ, ರೈತ ಕೃಷಿ ಕಾರ್ಮಿಕರಾದ ಶರಣಮ್ಮ ಕೋಲಕುಂದಿ, ಮರೆಮ್ಮ ಛತ್ರಿಕಿ, ಲಕ್ಷ್ಮೀ ಬುಕ್ಕಾ, ಕಲಾವತಿ ಹಡಪದ, ಭವಾನಿ ಹಡಪದ, ದೇವಕಿ ಸುಣಗಾರ, ನಾಗಮ್ಮ ಹೋಳಿ, ಶರಣಮ್ಮ ಛತ್ರಿಕಿ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕಾಗಮಿಸಿದ ತಾಪಂ ಸಹಾಯಕ ನಿರ್ದೇಶಕ ಪಂಡಿತ್‌ ಸಿಂಧೆ ಮನವಿ ಸ್ವೀಕರಿಸಿದರು. ಉದ್ಯೋಗ ಕೇಳುವ ಪ್ರತಿಯೊಬ್ಬರಿಗೂ ಉದ್ಯೋಗ ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next