ಪುಣೆ: ಅಂಬಿಲ್ ಓಧಾದಲ್ಲಿನ ಕಾಲನಿಯ ಕೆಲವು ಮನೆಗಳನ್ನು ಕಳೆದ ವಾರ ಮಹಾನಗರ ಪಾಲಿಕೆಯ ಅತಿಕ್ರಮಣ ತೆರವು ದಳವು ಕೆಡವಿ ಹಾಕಿರುವುದನ್ನು ವಿರೋಧಿಸಿ ಸ್ಥಳೀಯರು ಸೋಮವಾರ ಪುಣೆ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಮನಪಾ ಪ್ರವೇಶದ್ವಾರದಲ್ಲಿ ನಾಗರಿಕರು ಮತ್ತು ವಂಚಿತ ಬಹುಜನ ಅಘಾಡಿ ಕಾರ್ಯ ಕರ್ತರು ಸೋಮವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದರು. ಈ ವೇಳೆ ಬಾರಮತಿ ಸಂಸದೆ ಸುಪ್ರಿಯಾ ಸುಳೆ ಎನ್‌ಎಂಸಿಗೆ ಬಂದಿದ್ದು, ಪ್ರತಿ ಭಟನನಿರತರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಈ ಸಂದರ್ಭ ಪುಣೆ ಉಸ್ತುವಾರಿ ಸಚಿವ ಅಜಿತ್ ಪವಾರ್ ರಾಜೀನಾಮೆ ನೀಡಬೇಕೆಂದು ಪ್ರತಿಭಟನ ನಿರತರು ಆಗ್ರಹಿಸಿದರು.
ನಿಕಮ್ ಬಿಲ್ಡರ್ ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಮೂಲಕ ಕ್ರಮ ಕೈಗೊಳ್ಳಲಾಗಿದ್ದು, ಅಜಿತ್ ಪವಾರ್ ಅವರ ವ್ಯಕ್ತಿ ಎಂದು ಬೆದರಿಕೆ ಹಾಕುವ ಮೂಲಕ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ನಮ್ಮ ಮನೆಗಳನ್ನು ನಮಗೆ ಕೊಡಿ ಎಂದು ಸುಪ್ರಿಯಾ ಸುಳೆ ಅವರನ್ನು ಆಗ್ರಹಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಳೆ, ನಾಗರಿಕರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಅಜಿತ್ ಪವಾರ್ ಅವರ ಸಮೀಪದ ವ್ಯಕ್ತಿ ಎಂದು ಹೇಳುವ ಯಾವುದೇ ಅಧಿಕಾರಿ ಅಥವಾ ಬಿಲ್ಡರ್‌ಗಳು ಕಾಲನಿಯ ಮನೆಗಳನ್ನು ಕೆಡವಿ ಹಾಕುವ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಅವರು ಸಾಕ್ಷ್ಯವನ್ನು ನೀಡಬೇಕು. ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.
ಕಾರ್ಯಾ ಚರಣೆ ಸಮಯದಲ್ಲಿ ಘರ್ಷಣೆ:
ಪುಣೆಯ ಮಹಾನಗರ ಪಾಲಿಕೆ ಗುರುವಾರ ಪುಣೆಯ ಅಂಬಿಲ್ ಒಧಾ ಪ್ರದೇಶದಲ್ಲಿ ವಾಸಿ ಸುವ ಸ್ಥಳೀಯರ ಮನೆಗಳನ್ನು ಪೊಲೀಸರ ಸಹಾಯದಿಂದ ಕೆಡವಿತ್ತು. ಕಾರ್ಯಾ ಚರಣೆಯ ಸಮಯದಲ್ಲಿ ಘರ್ಷಣೆ, ಗೊಂದಲ ಗಳುಂಟಾದರೂ ಮಹಾನಗರ ಪಾಲಿಕೆ ಈ ಕ್ರಮವನ್ನು ಮುಂದುವರಿಸಿತ್ತು.