ಬೆಂಗಳೂರು: “ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವರು, ಪಂಕ್ಚರ್ ಹಾಕುವವರು ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ನಗರದ ಪುರಭವನದ ಮುಂಭಾಗ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಹಿಂದೂ ಸಂಘಟನೆಗಳು ಏರ್ಪಡಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಯ್ದೆ ಬೆಂಬಲಿಸಿ ಬಂದಿರುವ ಪ್ರತಿಯೊಬ್ಬರೂ ದೇಶದ ಆರ್ಥಿಕತೆಗೆ ಪೂರಕವಾಗಿರುವ ಆಟೋ ಚಾಲಕರು, ವಕೀಲರು, ವಿದ್ಯಾವಂತರು. ಆದರೆ, ಪ್ರತಿಭಟನೆ ಮಾಡುವವರು “ಪಂಕ್ಚರ್’ ಹಾಕುವವರು ಎಂದು ಕಿಡಿಕಾರಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದಲೂ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದ್ದು, ಯುವಕರ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು. ಪೌರತ್ವ ತಿದ್ದುಪಡಿ ಕಾಯ್ದೆ ಹಿಂದೂ ಮತ್ತು ಮುಸ್ಲಿಮರನ್ನು ಒಂದೇ ತರಹ ನೋಡುವ ಕಾನೂನು. ಆದರೆ, ಕಾಂಗ್ರೆಸ್ ನಾಯಕರು ಈ ಕಾಯ್ದೆ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆಂದು ಆರೋಪಿಸಿದರು.
ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಶೋಷಣೆಗೆ ಒಳಗಾದ ಹಿಂದೂ, ಸಿಖ್, ಬೌದ್ಧ ಧರ್ಮದ ಜನರಿಗೆ ಪೌರತ್ವ ಕೊಡುವುದು ತಪ್ಪು ಅನ್ನುತ್ತಾರೆ. ಆದರೆ, ಇವರು ಅನ್ಯದೇಶದಿಂದ ಅಕ್ರಮವಾಗಿ ಬಂದಿರುವ ನುಸುಳುಕೋರರಿಗೆ ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್ ನೀಡುವುದು ಸರಿಯೇ ಎಂದು ಪ್ರಶ್ನಿಸಿದರು.
ಕ್ಷಮೆಯಾಚನೆಗೆ ಆಗ್ರಹ: ಅಕ್ಷರ ಜ್ಞಾನವಿಲ್ಲದವರು ಪ್ರತಿಭಟನೆ ಮಾಡಲು ಅನರ್ಹರು ಎಂದು ಸಂಸದ ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆಯನ್ನು ಜೆಡಿಎಸ್ ಖಂಡಿಸಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.