ಧಾರವಾಡ: ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ನೂತನ ವಕೀಲರ ಕಲ್ಯಾಣ ನಿಧಿ ಅಧಿನಿಯಮ ವಿರೋಧಿಸಿ ಧಾರವಾಡ ವಕೀಲರ ಸಂಘದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ನೇತೃತ್ವದಲ್ಲಿ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದ ನ್ಯಾಯವಾದಿಗಳು, ನೂತನ ವಕೀಲರ ಕಲ್ಯಾಣ ನಿಧಿ ಅಧಿನಿಯಮವನ್ನು ಜೂ.12ರಿಂದ ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ, ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು.
ಸಂಘದ ಕಚೇರಿಯಿಂದ ಜ್ಯುವಲಿ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಕೆಲ ಹೊತ್ತು ಜ್ಯುಬಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆದು ಧರಣಿ ಕೈಗೊಂಡರು. ನೂತನ ಕಾಯ್ದೆಯಲ್ಲಿ ವಕೀಲರ ಹಿತದೃಷ್ಟಿಯ ಬದಲಿಗೆ ತೊಂದರೆಯಾಗುವ ಅಂಶಗಳೇ ಹೆಚ್ಚಿವೆ.
ಇದಲ್ಲದೇ ಕಲ್ಯಾಣ ನಿಧಿ ಶುಲ್ಕವನ್ನು 10ರಿಂದ 30 ರೂ. ಗಳಿಗೆ ಹೆಚ್ಚಳ ಮಾಡಿದ್ದು ಸರಿಯಲ್ಲ. ಜೊತೆಗೆ ಪಿಂಚಣಿ ಯೋಜನೆಯೂ ನೂತನ ಅಧಿನಿಯಮದಲ್ಲಿ ಇಲ್ಲ ಎಂದು ದೂರಿದರು. ವಕೀಲರಿಗೆ ಉಪಯೋಗವಿಲ್ಲದ ಈ ಎಲ್ಲ ಅಂಶಗಳನ್ನು ಸೇರಿಸಿ ನೂತನ ಅಧಿನಿಯಮ ತರಲು ಹೊರಟಿದ್ದು ಸರಿಯಲ್ಲ.
ಹಿರಿಯ ವಕೀಲರು ಹಾಗೂ ವಕೀಲರ ಸಂಘಗಳೊಂದಿಗೆ ಸಮಾಲೋಚನೆ ನಡೆಸದೇ ಈ ಕಾಯ್ದೆ ತರಲು ರಾಜ್ಯ ಸರಕಾರ ಮುಂದಾಗಿದೆ. ಹೀಗಾಗಿ ಈ ವಿರೋಧಿಸಿ ಪ್ರತ್ಯೇಕ ವಕೀಲರ ಪರಿಷತ್ ರಚಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್. ಪೊಲೀಸ್‌ಪಾಟೀಲ ಇದ್ದರು.