ಮೈಸೂರು: ಬೆಳಗಾವಿಯ ಆನಗೋಳದಲ್ಲಿ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನ ಮಾಡಿರುವ ಹಾಗೂ ಕನ್ನಡ ಧ್ವಜ ಸುಟ್ಟು ಹಾಕಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳೊಡಗೂಡಿ ಕರ್ನಾಟಕ ಪ್ರದೇಶ ಕುರುಬರ ಸಂಘದಿಂದ ಡಿ.24 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು.
ಸಿದ್ಧಾರ್ಥ ನಗರದ ಕುರುಬರ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಮಿತಿ ಮೀರಿದೆ. ಸ್ವಾತಂತ್ರ್ಯ ಹೋರಾಟಗಾರನಿಗೆ ಅವಮಾನ ಮಾಡಿರುವ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಎಚ್ಚರಿಕೆ ಅವಶ್ಯ: ಬೆಳಗಾವಿಯಲ್ಲಿ ಎಂಇಎಸ್ ಕಿಡಿಗೇಡಿಗಳು ಪದೇಪದೇ ಕನ್ನಡಿಗರನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕೆಂದರು.
ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಡಿ.24ರ ಬೆಳಗ್ಗೆ 10ಕ್ಕೆ ಅರಮನೆ ಮುಂಭಾಗ ಇರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಕಲಾತಂಡಗಳೊಂದಿಗೆ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಪಾದಯಾತ್ರೆಗೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಿಂದ ಸಂಘದ ಸದಸ್ಯರು ಸಮುದಾಯದ ಬಾಂಧವರು, ರೈತ ಸಂಘ, ಕನ್ನಡ ಪರ ಸಂಘಟನೆಗಳು, ಸರ್ವಜನಾಂಗದ ಮುಖಂಡರು, ಸಹಕಾರ ಬ್ಯಾಂಕ್‌ಗಳ ನಿರ್ದೇಶಕರು, ನಗರಪಾಲಿಕೆ ಮಾಜಿ ಹಾಗೂ ಹಾಲಿ ಸದಸ್ಯರು, ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ವೇಳೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಸದಸ್ಯ ಜಿ.ಗೋಪಿ, ಸಂಘದ ನಿರ್ದೇಶಕರಾದ ರೇಖಾ ಪ್ರಿಯದರ್ಶಿನಿ, ನಾಗರಾಜ್, ಮುಖಂಡರಾದ ನಂಜುಂಡ ಸ್ವಾಮಿ, ಕೆಂಪಣ್ಣ, ಕೋಟೆ ಶಿವಪ್ಪ, ಬಸವರಾಜು, ಮುಖಂಡರಾದ ಶಿವಣ್ಣ(ಗುಡ್ಡಪ್ಪ), ರವಿ, ಬಸಪ್ಪ, ಶಿವರಾಂ, ರಾಜೇಶ್ವರಿ, ಹರೀಶ್ ಮತ್ತಿತರರಿದ್ದರು.