Advertisement
ಶಾಲೆಯಲ್ಲಿ ನಡೆದ ಪ್ರತಿಭಟನ ಸಭೆ ಯಲ್ಲಿ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ, ಕೊಂಬೆಟ್ಟು ವಾರ್ಡ್ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್ ಮಾತನಾಡಿ, ಕೊಂಬೆಟ್ಟು ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸಲು ಅಧ್ಯಾಪಕರು ವಿಶೇಷ ಅಭಿಯಾನ ನಡೆಸಿ ಮಕ್ಕಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಯಿತು. ಆದರೆ ಈಗ ಶಿಕ್ಷಕರ ಕೊರತೆಯಾಗಿದೆ. ಶಾಸಕರ ನೇತೃತ್ವ ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಭೇಟಿ ಮಾಡಿ ಈ ಕುರಿತು ಮನವರಿಕೆ ಮಾಡಲಾಗಿತ್ತು.
ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ನ್ಯಾಯವಾದಿ ಪಡ್ಡಂಬೈಲು ಸುರೇಶ್ ಶೆಟ್ಟಿ ಮಾತನಾಡಿ, ಶತಮಾನವನ್ನು ಕಂಡ ಸರಕಾರಿ ಶಾಲೆ ಎಲ್ಲ ರೀತಿಯ ಪ್ರಗತಿಯ ದೃಷ್ಟಿಯಿಂದ ಮುಂಚೂಣಿಯಲ್ಲಿದೆ. 650 ವಿದ್ಯಾರ್ಥಿಗಳಿರುವ ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರು, ಚಿತ್ರಕಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರನ್ನು ಹೊರತುಪಡಿಸಿ ಸರಕಾರದ ನಿಯಮಾವಳಿಯಂತೆ 20 ಮಂದಿ ಶಿಕ್ಷಕರಿರಬೇಕು. ಈಗ ಒಂದೇ ಬಾರಿಗೆ ಆರು ಮಂದಿ ಶಿಕ್ಷಕರನ್ನು ವರ್ಗಾವಣೆ ಮಾಡಿದ ಕಾರಣ ಕೇವಲ 13 ಮಂದಿ ಶಿಕ್ಷಕರಿದ್ದಾರೆ. ಶಾಲೆಯ ಬೆಳವಣಿಗೆಗೆ ಇದು ಮಾರಕವಾಗಿದೆ. ಈ ನಿಟ್ಟಿನಲ್ಲಿ ನ್ಯಾಯ ದೊರೆಯುವವರೆಗೆ ಪ್ರತಿಭಟನೆ ಮಾಡುತ್ತೇವೆ ಎಂದರು.