Advertisement

ಹಾರೋಹಳ್ಳಿ ಸಾರಿಗೆ ನೌಕರರಿಂದ ಪ್ರತಿಭಟನೆ

05:57 PM Mar 03, 2020 | Suhan S |

ಕನಕಪುರ: ಹಾರೋಹಳ್ಳಿ ಸಾರಿಗೆ ಘಟಕದ ವ್ಯವಸ್ಥಾಪಕರ ನಿರಂತರ ಕಿರುಕುಳದಿಂದ ಬೇಸತ್ತ ಸಾರಿಗೆ ನೌಕರರು ಸೋಮವಾರ ಸಾರ್ವಜನಿಕ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ, ಘಟಕದ ವ್ಯವಸ್ಥಾಪಕರನ್ನು ವರ್ಗಾವಣೆಗೊಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಹಾರೋಹಳ್ಳಿ ಘಟಕದ ಸಾರಿಗೆ ವ್ಯವಸ್ಥಾಪಕ ರಾಘವೇಂದ್ರ ಕುಮಾರ್‌ ಅವರು ನೌಕರರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಎಂದು ಆರೋಪಿಸಿ ಸಾರಿಗೆ ನೌಕರರು ಘಟಕದ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಹಾರೋಹಳ್ಳಿಯಿಂದ ಬೆಂಗಳೂರಿಗೆ ಕಾರ್ಯನಿಮಿತ್ತ ತೆರಳ ಬೇಕಾದ ಉದ್ಯೋಗಿಗಳು, ಶಾಲೆ ಮಕ್ಕಳು ಸಾರಿಗೆ ವ್ಯವಸ್ಥೆಯಿಲ್ಲದೆ ಎರಡು ತಾಸು ಪರದಾಡುವಂತಾಯಿತು.

ನೌಕರರ ಆರೋಪಗಳು: ಮಹಿಳಾ ನಿರ್ವಾಹಕರು ಕಡ್ಡಾಯವಾಗಿ ಆರು ಸಿಂಗಲ್‌ ಕಾರ್ಯನಿರ್ವಹಿಸ ಬೇಕು ಎಂದು ಒತ್ತಡ ಹೇರುತ್ತಾರೆ. ಅಲ್ಲದೆ ಪದೇ ಪದೆ ಚಾಲಕ ಮತ್ತು ನಿರ್ವಾಹಕರಿಗೆ ಮಾರ್ಗ ಬದಲಾವಣೆ ಮಾಡುತ್ತಾರೆ. ಇದರಿಂದ ಆಯಾ ಮಾರ್ಗಗಳಿಗೆ ಹೊಂದಿಕೊಳ್ಳವುದು ಕಷ್ಟವಾಗುತ್ತಿದೆ. ಮಹಿಳಾ ನಿರ್ವಾಹಕರು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸ ಬೇಕು. ಅಲ್ಲದೆ ವಾಹನಗಳ ದುರಸ್ತಿ ಮಾಡಿಸುವುದಿಲ್ಲ. ಹೀಗಾಗಿ ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟುನಿಲ್ಲುವುದರಿಂದ ಪ್ರಯಾಣಿಕರು ನಮ್ಮ ಮೇಲೆ ಮುಗಿಬೀಳುತ್ತಾರೆ. ಸಮಸ್ಯೆ ಹೇಳಿಕೊಳ್ಳಲು ಹೋದರೆ, ಘಟಕದ ವ್ಯವ ಸ್ಥಾಪಕರು ನನಗೆ ಮೇಲಧಿಕಾರಿಗಳು, ರಾಜಕಾರಣಿಗಳ ಸಹಕಾರವಿದೆ. ನೀವು ಏನು ಮಾಡಲು ಸಾಧ್ಯವಿಲ್ಲ. ನನ್ನ ಆದೇಶ ಪಾಲಿಸದಿದ್ದರೆ, ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕುತ್ತಾರೆ.

ಕೆಲವು ನಿರ್ವಾಹಕ ಮತ್ತು ಚಾಲಕರು ಅನಾರೋಗ್ಯದಿಂದ ಬಳಲುತ್ತಿದ್ದರೂ, ರಜೆ ನೀಡದೆ ಹೆಚ್ಚುವರಿ ಕಾರ್ಯನಿರ್ವಹಿಸುವಂತೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕೆಲವೊಮ್ಮೆ ಚಾಲಕರು ರಜೆ ಹಾಕಿದಾಗ ಮಹಿಳಾ ನಿರ್ವಾಹಕರಿಗೆ ಮಾರ್ಗ ಕೊಡದೆ, ರಜೆ ನೀಡದೆ ಸಂಜೆವರೆಗೂ ಘಟಕದಲ್ಲಿ ಕಾಯಿಸುತ್ತಾರೆ. ಈ ಸಮಸ್ಯೆಗಳನ್ನು ಮೇಲಧಿಕಾರಿಗಳು ಸ್ಥಳಕ್ಕೆ ಬಂದು ಬಗೆಹರಿಸಬೇಕು ಎಂದು ಪಟ್ಟುಹಿಡಿದರು. ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿ ಪುರುಷೋತ್ತಮ್‌ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಘಟಕದ ವ್ಯವಸ್ಥಾಪಕ ಮಹೇಂದ್ರ ಕುಮಾರ್‌ ಅವರು ಸ್ಥಳಕ್ಕೆ ಬರಬೇಕು. ಅವರನ್ನು ವರ್ಗಾವಣೆ ಮಾಡಬೇಕು ಎಂದು ಜಿಲ್ಲಾ ಸಾರಿಗೆ ವ್ಯವಸ್ಥಾಪಕ ಪುರುಷೋತ್ತಮ್‌ ಅವರಿಗೆ ನೌಕರರು ಒತ್ತಡ ಹೇರಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಮಂಜು, ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಆನಂದ್‌ಗೌಡ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಿ.ಸಿ.ನಾಗರಾಜು, ಗೌರವ ಅಧ್ಯಕ್ಷ ಹನುಮಂತಯ್ಯ, ಜಿಲ್ಲಾ ಕಾರ್ಯಧ್ಯಕ್ಷ ನಂದಿಶ್‌, ಜಿಲ್ಲಾ ಕಾರ್ಮಿಕ ಘಟಕದ ಕಾರ್ಯಧ್ಯಕ್ಷ ವೆಂಕಟೇಶ್‌, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಕೋಟೆ ಮುನಿ, ಹೋಬಳಿ ಪ್ರಧಾನ ಕಾರ್ಯದರ್ಶಿ ನಾಗರಾಜು, ಸಂತೋಷ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next