ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ಯೋಜನೆ ವಿರೋಧಿಸಿ ರಾಜ್ಯ ಸರ್ಕಾರಿ ನೌಕರರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬೆಂಗಳೂರಿನಲ್ಲಿ ವಿಧಾನಸೌಧದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು
ಸರ್ಕಾರಿ ನೌಕರರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಮಾತನಾಡಿ, ಹೊಸ ಪಿಂಚಣಿ ಯೋಜನೆಯಿಂದ ರಾಜ್ಯದ 1.80 ಲಕ್ಷ ಸರ್ಕಾರಿ ನೌಕರರು ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಹಾಗೂ ಇತರ ಸೌಲಭ್ಯಗಳಿಂದ ವಂಚಿತರಾಗಿ ಸಾಮಾಜಿಕ ಅನ್ಯಾಯಕ್ಕೆ ಒಳಗಾಗುತ್ತಾರೆ.
ಕೇಂದ್ರ ಸರ್ಕಾರದ ಅನಿಶ್ಚಿತ ಹಾಗೂ ಅಭದ್ರತೆಯ ಪಿಂಚಣಿ ಯೋಜನೆಯಿಂದ ದೇಶಾದ್ಯಂತ ನೌಕರರು ಹಾಗೂ ಕಾರ್ಮಿಕರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಕೇಂದ್ರದ ಹೊಸ ಪಿಂಚಣಿ ಯೋಜನೆಯನ್ನು ಕೈ ಬಿಟ್ಟು ಹಳೆಯ ಪಿಂಚಣಿ ಯೋಜನೆ ಯನ್ನೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಮನವಿ ಸಲ್ಲಿಸಿದರು.ಇದೇ ವೇಳೆ, ಮಂಜೇಗೌಡ ಬಣದ ವಿರುದ್ಧ ಶ್ರೀಕಾಂತ್ ಬಣ ಪ್ರತಿಭಟನೆ ನಡೆಸಿತು. ಆದರೆ, ಅವರನ್ನು ನೌಕರರ ಸಂಘದಿಂದ ವಜಾ ಮಾಡಲಾಗಿದೆ ಎಂದು ಮಂಜೇಗೌಡ ತಿಳಿಸಿದ್ದಾರೆ.