ಬೆಂಗಳೂರು: ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕೂಡಲೇ ಪಾವತಿಸಬೇಕು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ನೂರಾರು ರೈತರು ಸ್ವಾತಂತ್ರ್ಯ ಉದ್ಯಾನದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ವಿಧಾನಸೌಧದ ಮುಂದೆ ಪ್ರತಿಭಟನೆಗೆ ಮುಂದಾದ ರೈತರನ್ನು ಪೊಲೀಸರು ತಡೆದರು. ನಂತರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮುಂದುವರಿಸಿದರು. ರೈತ ವಿರೊಧಿ ಧೋರಣೆ ಪ್ರದರ್ಶಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಆರು ತಿಂಗಳಿಂದ ರೈತರ ಕಬ್ಬು ಹಣವನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರು ಪಾವತಿಸಿಲ್ಲ. ಉತ್ಪಾದನೆಯಾದ ಸಕ್ಕರೆ ಮೇಲೆ ಬ್ಯಾಂಕ್‌ಗಳಿಂದ ಶೇ.80ರಷ್ಟು ಸಾಲ ಪಡೆಯುತ್ತಿದ್ದಾರೆ, ಇಷ್ಟಾದರೂ ರೈತರಿಗೆ ಸೂಕ್ತ ಸಮಯದಲ್ಲಿ ಹಣ ನೀಡುತ್ತಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ 3 ಕೋಟಿ ರೂ.ಗೂ ಹೆಚ್ಚು ಬಾಕಿ ಉಳಿಸಿಕೊಂಡಿದ್ದಾರೆಂದು ಆರೋಪಿಸಿದರು.
ರೈತಪರ ಎಂದು ಹೇಳಿಕೊಳ್ಳುವ ಸರ್ಕಾರ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಸರ್ಕಾರ ಸಾಲಮನ್ನಾ ಮಾಡಿದ್ದರೂ ಬ್ಯಾಂಕ್‌ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಹೋರಾಟದಲ್ಲಿ ತೊಡಗಿಸಿಕೊಂಡಿರುವ ರೈತರ ಮೇಲೆ ಕೇಸ್ ದಾಖಲಿಸಲಾಗುತ್ತಿದೆ. ಈ ಸಮಸ್ಯೆಗಳನ್ನು ಸರ್ಕಾರ ಕೂಡಲೇ ಬಗೆಹರಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು.