ಅಫಜಲಪುರ: ಜ್ಞಾನವಾಪಿ ಮಸೀದಿ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಪತ್ರವನ್ನು ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ನೀಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಅಧ್ಯಕ್ಷ ಮಕದೂಮ್ ಮುಹಿಯದ್ದೀನ್ ಮಾತನಾಡಿ, ಜ್ಞಾನವಾಪಿಯಲ್ಲಿ ದೊರೆತಿರುವುದು ಶಿವಲಿಂಗವಲ್ಲ ಅದು ಕಾರಂಜಿ. ಮುಸ್ಲಿಮರು ಪ್ರಾರ್ಥನೆಗೂ ಮೊದಲು ಕೈಕಾಲು ತೊಳೆದು ಕೊಳ್ಳುವ ಜಾಗವಾಗಿದೆ. ಈಗ ಅದನ್ನೇ ಶಿವಲಿಂಗ ಎಂದು ಬಿಂಬಿಸಲಾಗುತ್ತಿದೆ ಎಂದು ದೂರಿದರು.
1991ರ ಭಾರತದ ಆರಾಧನಾ ಕಾಯ್ದೆ ಪ್ರಕಾರ 1942ರಿಂದ ಯಾವ ಸ್ಥಳಗಳಲ್ಲಿ ಮಸೀದಿ, ಚರ್ಚ್, ದೇವಾಲಯಗಳು ಇರುತ್ತವೆಯೋ ಅವುಗಳನ್ನು ಯಥಾಸ್ಥಿತಿಯಲ್ಲಿ ಬಿಡಬೇಕು. ಅವುಗಳಿಗೆ ರಕ್ಷಣೆ ನೀಡಬೇಕು ಎಂದಿದೆ. ಆದರೆ ಕಾಯ್ದೆ ಮೀರಿ ಮುಸ್ಲಿಮರ ಪವಿತ್ರ ಸ್ಥಳಗಳಾದ ಮಸೀದಿಗಳನ್ನು ಧ್ವಂಸ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ನ್ಯಾಯಾಲಯ ಕೂಡ 1991ರ ಆರಾಧನಾ ಕಾಯ್ದೆಯನ್ನು ಪರಿಶೀಲಿಸಲಿಲ್ಲ. ಕೇವಲ ಐವರು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕೆ ಆ ಜಾಗ ಚಿತ್ರೀಕರಣ ಮಾಡಲು ಅನುಮತಿ ನೀಡಿದೆ. ಇದು ಸರಿಯಲ್ಲ ಎಂದು ದೂರಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಜಮೀಲ್ ಗೌಂಡಿ ಮಾತನಾಡಿ, ಯಾವುದೇ ಧಾರ್ಮಿಕ ಪಂಥದ ಸ್ಥಳವನ್ನು ಇನ್ನೊಂದು ಪಂಥಕ್ಕೆ ಸೇರಿಸಬಾರದು. ಆರಾಧನಾ ಸ್ಥಳಗಳ ಸ್ವರೂಪವು ಸ್ವಾತಂತ್ರ್ಯಾ ನಂತರ ಹಾಗೆಯೇ ಮುಂದುವರಿಯಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಸೀದಿಗಳ ತೆರವಿಗೆ ಕುತಂತ್ರ ನಡೆಸಿದೆ ಎಂದು ಆರೋಪಿಸಿದರು.
ಮುಖಂಡರಾದ ಮುಸಾಹಿಬ್ ಅಫಜಲ್, ಅನ್ವರ್ ಶೇಖ್, ಶಹಾಜಾನ್ ಜಹಾಗೀರದಾರ, ಮುಕೀತ್ ಅಫಜಲ್, ಶಬ್ಬೀರ್ ಅಹ್ಮದ್, ಖಮರುನ್ ಜಮಾ, ಅರಬಾಜ್ ಶೇಖ್, ಮುಪ್ತಿ ಶಬ್ಬೀರ್ ಪಟೇಲ್, ಫೈಸಲ್, ಅಸ್ಲಂ ಅಕ್ತರ್, ರಿಯಾಜ್ ಮೌಲಾಸಾಬ್ ಹಾಗೂ ಇನ್ನಿತರರು ಇದ್ದರು.