Advertisement

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಆಪ್‌ ಕಾರ್ಯಕರ್ತರ ಪ್ರತಿಭಟನೆ

06:08 PM Aug 01, 2022 | Team Udayavani |

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಲ್ಲಿ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಬೆಳೆಯುತ್ತಿರುವ ನಗರವಾದ ಐತಿಹಾಸಿಕ ವಿಜಯಪುರ ನಗರ ಸ್ಥಳೀಯ ಆಡಳಿತ ವ್ಯವಸ್ಥೆ ನಗರಸಭೆ ವ್ಯವಸ್ಥೆಯಿಂದ ಮಹಾನಗರ ಪಾಲಿಕೆಯಾಗಿ ಬಡ್ತಿ ಹೊಂದಿ 7-8 ವರ್ಷಗಳಾಗಿವೆ. ಆದರೆ ಮಹಾನಗರ ಪಾಲಿಕೆಗೆ ತಕ್ಕಂತೆ ಸ್ಥಳೀಯ ನಿವಾಸಿಗಳಿಗೆ ಸೂಕ್ತ ಮೂಲ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಮಹಾನಗರ ಪಾಲಿಕೆ ಆಡಳಿತ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದ ಬಳಿಕ ಸರ್ಕಾರ ನಗರದ ಮೂಲ ಸೌಲಭ್ಯಗಳಿಗಾಗಿ ಪ್ರತಿ ವರ್ಷಕ್ಕೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಸದರಿ ಅನುದಾನ ಮಹಾನಗರ ಪಾಲಿಕೆ ಸರಿಯಾಗಿ ಬಳಕೆ ಮಾಡುತ್ತಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಡಳಿತ ಮಂಡಳಿ ಇಲ್ಲದ ಕಾರಣ ಜನತೆಯ ಸಮಸ್ಯೆ ಆಲಿಸಲು ಪಾಲಿಕೆ ಸದಸ್ಯರೂ ಇಲ್ಲ. ಇದರಿಂದ ಮಹಾನಗರದ ಬಹುತೇಕ ಎಲ್ಲ ಬಡಾವಣೆಗಳ ಜನರು ಮೂಲ ಸೌಲಭ್ಯಗಳ ಸಮಸ್ಯೆ ಅನುಭವಿಸುವಂತಾಗಿದೆ ಎಂದು ದೂರಿದರು.

ವಿಜಯಪುರ ನಗರದ ವಾರ್ಡ್‌ ನಂ. 28ರಲ್ಲಿ ಬರುವ ನವಬಾಗ ಪ್ರದೇಶದ ಸರ್ಕಾರಿ ಪದವಿ ಕಾಲೇಜಿನವರೆಗೆ ರಸ್ತೆ ಅಭಿವೃದ್ಧಿ ಮಾಡಬೇಕು. ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದಿಂದ ರಾಮನಗರ ಬಿದನೂರ ಪೆಟ್ರೋಲ್‌ ಪಂಪ್‌ವರೆಗೆ ರಸ್ತೆ ಹಾಗೂ ಒಳಚರಂಡಿ ಹಾಳಾಗಿದ್ದು ಸರಿಪಡಿಸಬೇಕು. ಡಾ| ಅಂಬೇಡ್ಕರ್‌ ವೃತ್ತದಿಂದ ರೈಲ್ವೆ ಸ್ಟೇಷನ್‌ ವರೆಗಿನ ರಸ್ತೆ, ಬಾಗಲಕೋಟೆ ಕ್ರಾಸ್‌ನಿಂದ ಅಥಾವುಲ್ಲಾ ಚೌಕ್‌, ಬಡಿಕಮಾನ್‌, ಜುಮ್ಮಾ ಮಸೀದಿ, ಹಕಿಂಚೌಕ್‌ ಮಾರ್ಗವಾಗಿ ಗೋಳಗುಮ್ಮಟವರೆಗಿನ ರಸ್ತೆಯನ್ನು ದುರಸ್ತಿ ಮಾಡಬೇಕು. ವಾರ್ಡ್‌ ನಂ. 8ರಲ್ಲಿ ಹಳೆ ವಿಠಲ ಮಂದಿರ ಮಾರ್ಗದ ರಸ್ತೆ-ಚರಂಡಿ ದುರಸ್ತಿ, ರುಕ್ಕಾಂಗದ ಶಾಲೆ ಹತ್ತಿರ ಚರಂಡಿ ಬ್ಲಾಕ್‌ ಮುಚ್ಚಬೇಕು ಎಂದು ಆಗ್ರಹಿಸಿದರು.

ನಗರದ ಬಹುತೇಕ ಕಡೆ ಬೀದಿ ದೀಪಗಳೇ ಇಲ್ಲದ ದುಸ್ಥಿತಿ ಇದೆ. ಬಸ್‌ ನಿಲ್ದಾಣದಿಂದ ಜಮಖಂಡಿಗೆ ಹೋಗುವ ಮಾರ್ಗ, ಮಹಾನಗರ ಪಾಲಿಕೆಯಿಂದ ಆರ್‌ಟಿಒ ಆಫೀಸ್‌ ಪರಿಸರ ಸೇರಿದಂತೆ ನಗರದಲ್ಲಿ ಬಹುತೇಕ ಕಡೆ ಒಳಚರಂಡಿ ವ್ಯವಸ್ಥೆ ಸರಿ ಇಲ್ಲ. ಜಲನಗರ ಕ್ರಾಸ್‌ದಿಂದ ಬಿಡಿಎ ವರೆಗೆ ಮತ್ತು ಬಡಾವಣೆಯ ಒಳ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ನಗರದಲ್ಲಿರುವ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಬೇಕು. ನಗರದ ಬೀದಿ ಕಸ ಗೂಡಿಸುವ, ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿಗೆ ಮುನ್ನವೇ ಚರಂಡಿ ಜೋಡಣೆ, ಕೇಬಲ್‌ ಅಳವಡಿಕೆ, ಗ್ಯಾಸ್‌ ಪೈಪ್‌ಲೈನ್‌, ನೀರಿನ ಸಂಪರ್ಕದಂಥ ಎಲ್ಲ ಕಾಮಗಾರಿಗಳನ್ನು ಕಾಮಗಾರಿಗೆ ಮುನ್ನವೇ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರನ್ನು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಬೋಗೇಶ ಸೋಲಾಪುರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನರಜ ಬಸವಂತಿ, ನಾರಾಯಣ ಸಂಸ್ಥಾನಿಕ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಗನಾಳ, ನಿಹಾದ್‌ ಅಹ್ಮದ್‌ ಗೋಡಿಹಾಳ, ಡಾ| ಸಾಬೀರ ಮೋಮಿನ್‌, ಡಾ| ಬಿ.ಎಂ. ಬಿರಾದಾರ, ಭಾಷಾ ಪಠಾಣ, ಅಮೀರ್‌ ಪಟೇಲ್‌, ದಶರಥ ಪೋಳ, ಶಖೀಲ್‌ ಡಾಲಾಯತ್‌, ನಬಿರಸೂಲ ಮಡಿಕೇಶ್ವರ, ಬುಡನ ಬೇಪಾರಿ, ರಮಜಾನ್‌ ಶೇಖ್‌ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next