ಬಾಗೇಪಲ್ಲಿ: ಒಂದು ರಜೆಯನ್ನೂ ನೀಡದೆ, ತಿಂಗಳ ಪೂರ್ತಿ ಕೆಲಸ ಮಾಡಿರುವ ವೇತನ, ಪಿಎಫ್ ಹಣ ನೀಡುವಂತೆ ಒತ್ತಾಯಿಸಿ ಗುತ್ತಿಗೆ ಆಧಾರದ ಪೌರ ಕಾರ್ಮಿಕರು ಪುರಸಭೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿ ಕೆ.ಮಧುಕರ್‌ಗೆ ಮನವಿ ಸಲ್ಲಿಸಿದರು.
ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ಮೂಲಕ ಆಯ್ಕೆ ಆಗಿರುವ ಪೌರ ಕಾರ್ಮಿಕರು, ಕಸ ಸಾಗಾಣಿಕೆ ವಾಹನ ಚಾಲಕರು ತಮ್ಮ ವೇತನ, ಪಿಎಫ್ ಹಣ ನೀಡುವಂತೆ ಒತ್ತಾಯಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ತಲಾ ಒಂದು ವಾರ್ಡ್‌ನ ಸ್ವತ್ಛತೆಗೆ ನಾಲ್ವರು ಕಾರ್ಮಿಕರ ಅಗತ್ಯ ಇದೆ. ಆದರೆ, ಗುತ್ತಿಗೆದಾರ ಒಬ್ಬ ಪೌರ ಕಾರ್ಮಿಕರಿಂದಲೇ ತಿಂಗಳ ಪೂರ್ತಿ ಕೆಲಸ ಮಾಡಿಸಿಕೊಂಡು, ಕಾರ್ಮಿಕರಿಗೆ ಸಕಾಲಕ್ಕೆ ವೇತನ, ಪಿಎಫ್ ಹಣ ನೀಡದೆ ವಂಚಿಸುತ್ತಿದ್ದಾರೆ. ವಿಶೇಷ ಹಬ್ಬ ಅಥವಾ ಅನಾರೋಗ್ಯಕ್ಕೆ ಗುರಿಯಾಗಿ ರಜೆ ಹಾಕಿದರೆ ವೇತನ ಕಡಿತಗೊಳಿಸುತ್ತಿದ್ದಾರೆ ಎಂದು ದೂರಿದರು.
ತಿಂಗಳ ಪೂರ್ತಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಒಂದು ದಿನವೂ ಸರ್ಕಾರಿ ರಜೆ ನೀಡುತ್ತಿಲ್ಲ. ಅನಿವಾರ್ಯ ಸಮಸ್ಯೆಗಳಿಂದ ರಜೆ ಹಾಕಿದರೆ ವೇತನ ನೀಡುವುದಿಲ್ಲ. ಒಂದು ತಿಂಗಳಲ್ಲಿ
ಕನಿಷ್ಠ ನಾಲ್ಕು ದಿನ ಸರ್ಕಾರಿ ರಜೆ ನೀಡಬೇಕು, ಒಂದು ವಾರ್ಡ್‌ನ ಸ್ವತ್ಛತೆಗೆ ನಾಲ್ವರು ಪೌರ ಕಾರ್ಮಿಕರನ್ನು ಅಯೋಜಿಸಿ ಹಲವು ವರ್ಷಗಳಿಂದ ಬಾಕಿ ಇಟ್ಟುಕೊಂಡಿರುವ ಪಿಎಫ್ ಹಣ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು, ಬಾಕಿ ಇರುವ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನೆಕಾರರು ಅಧಿಕಾರಿಗಳನ್ನು ಒತ್ತಾಯಿಸಿದರು.
ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡ, ಪರಿಸರ ಅಭಿಯಂತರೆ ನಮಸ್ಕೃತ, ಸದಸ್ಯರಾದ ಸುಜಾತಾ ನರಸಿಂಹನಾಯ್ಡು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ನಂತರ ಪೌರ ಕಾರ್ಮಿಕರು ಪ್ರತಿಭಟನೆ ಹಿಂಪಡೆದರು.