ಬೀದರ್: ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಕೋಳಿ ಮೊಟ್ಟೆ ಕೊಡುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ವಿವಿಧ ಬಸವಪರ ಸಂಘಟನೆಗಳಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಅಕ್ಕನಾಗಲಾಂಬಿಕಾ ಮಹಿಳಾ ಗಣ ಹಾಗೂ ಲಿಂಗಾಯತ ಸಮಾಜದ ಆಶ್ರಯದಲ್ಲಿ ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತದ ಅಧಿಕಾರಿಗೆ ನೀಡಲಾಯಿತು.
ಬಸವ ಮಂಟಪದ ಪ್ರಧಾನ ಸಂಚಾಲಕರಾದ ಶ್ರೀ ಮಾತೆ ಸತ್ಯಾದೇವಿ ಮಾತನಾಡಿ, ಅನುದಾನಿತ ಮತ್ತು ಸರ್ಕಾರಿ ಶಾಲೆಗಳ 1 ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಕೋಳಿಮೊಟ್ಟೆ ಕೊಡುವ ಕುರಿತು ಸರ್ಕಾರ ಆದೇಶ ಹೊರಡಿಸಿದೆ. ಮೊಟ್ಟೆ ಮಾಂಸಾಹಾರ, ಇದರಿಂದ ಮಕ್ಕಳ ಮಾನಸಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ. ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುವ ಕಳಕಳಿ ಇದ್ದಲ್ಲಿ ಹಣ್ಣು, ದ್ವಿದಳ ಧಾನ್ಯಗಳು ಮತ್ತು ಮೊಳಕೆ ಕಾಳು ಕೊಡುವ ವ್ಯವಸ್ಥೆ ಮಾಡಲಿ ಎಂದು ಸಲಹೆ ಮಾಡಿದರು.
ಶಾಲೆಯಲ್ಲಿ ಮುಗ್ಧ ಮಕ್ಕಳಿಗೆ ಕೋಳಿಮೊಟ್ಟೆ ನೀಡಿದರೆ ಉದ್ದೇಶಪೂರ್ವಕವಾಗಿ ಮಾಂಸಾಹಾರಕ್ಕೆ ಪ್ರಚೋದನೆ ನೀಡಿದಂತಾಗುತ್ತದೆ. ಮೊಟ್ಟೆ ತಿನ್ನುವ ಮಕ್ಕಳು ಮತ್ತು ತಿನ್ನದ ಮಕ್ಕಳೆಂದು ಶಾಲೆಯಲ್ಲಿ ನೀವೇ ಭೇದಭಾವ ಮೂಡಿಸಿದಂತಾಗುತ್ತದೆ. ಜೈನ ಮತ್ತು ಲಿಂಗಾಯತ ಧರ್ಮದ ಪ್ರಕಾರ ಮೊಟ್ಟೆ ಮಾಂಸಾಹಾರ ಪದ್ಧತಿಯಾಗಿದೆ. ಇದರಿಂದ ಸಸ್ಯಾಹಾರಿ ಪದ್ಧತಿ ಅಳವಡಿಸಿಕೊಂಡವರಿಗೆ ಇದು ಅವಮಾನ ಮಾಡಿದಂತಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಈ ನಿರ್ಣಯವನ್ನು ಹಿಂಪಡೆಯಬೇಕೆಂದು ಮಾತಾಜಿ ಆಗ್ರಹಿಸಿದರು.
ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಈ ಹಿಂದೆ ೨೦೦೭ರಲ್ಲಿ ಸರ್ಕಾರ ಇದೇ ನಿರ್ಧಾರ ಕೈಗೊಂಡಿತ್ತು. ಆದರೆ, ಅಂದಿನ ಸಿಎಂ ಕುಮಾರಸ್ವಾಮಿ ಅವರು ಬಸವ ದಳದ ಉಗ್ರ ಹೋರಾಟಕ್ಕೆ ಮಣಿದು ನಿರ್ಧಾರ ಕೈಬಿಟ್ಟಿದ್ದರು. ಮತ್ತೆ ಇಂದಿನ ಸಿಎಂ ಬೊಮ್ಮಾಯಿಯವರು ಈ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ. ಸೂಕ್ಷ್ಮ ಮನಸ್ಸಿನ ಮಕ್ಕಳಿಗೆ ಮೊಟ್ಟೆ ನೀಡಿ, ಮಾಂಸಾಹಾರಕ್ಕೆ ಪ್ರಚೋದನೆ ನೀಡುತ್ತಿರುವ ಸರ್ಕಾರದ ಆದೇಶ ಖಂಡನೀಯ. ಸರ್ಕಾರವು ಮೊಟ್ಟೆ ನೀಡುವ ಆದೇಶ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಲಿಂಗಾಯತ ಧರ್ಮ ಮಹಾಸಭಾದ ಉಪಾಧ್ಯಕ್ಷ ಶಿವರಾಜ ಪಾಟೀಲ, ಪ್ರಮುಖರಾದ ಶಿವಶರಣಪ್ಪ ಪಾಟೀಲ, ಬಸವರಾಜ ಸಂಗಮದ್, ಕುಶಾಲರಾವ ಪಾಟೀಲ, ಗಣಪತಿ ಬಿರಾದಾರ, ರಾಜೇಂದ್ರ ಜೊನ್ನಿಕೇರಿ, ಹಾವಶೆಟ್ಟಿ ಪಾಟೀಲ, ವಿಶ್ವನಾಥ ಉದಗೀರೆ, ಮನ್ಮಥಯ್ಯ ಸ್ವಾಮಿ, ರವಿಕಾಂತ ಬಿರಾದಾರ, ಕಲ್ಲಪ್ಪ ದೇಶಮುಖ, ಗಣಪತಿ ದೇಶಮುಖ, ಸಂಗಮೇಶ ಅಳ್ಳಿ, ಸುರೇಶ ಸ್ವಾಮಿ, ವಿವೇಕ ಪಟ್ನೆ, ವಿಶ್ವನಾಥ ಕೋರೆ ಇನ್ನಿತರರಿದ್ದರು.