ಚಿಕ್ಕಮಗಳೂರು: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರನ್ನು ನಾಶ ಮಾಡಲು ಮುಂದಾಗಿದ್ದು, ಇಂತಹ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಮತದಾದರೇ ಬುದ್ಧಿ ಕಲಿಸಬೇಕೆಂದು ರೈತ ಮುಖಂಡ ಗುರುಶಾಂತಪ್ಪ ಹೇಳಿದರು.
ಸೋಮವಾರ ರೈತ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್ ಹಿನ್ನೆಲೆಯಲ್ಲಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ರೈತರು ಈಗಾಗಲೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಪರಿಹರಿಸಬೇಕೇ ಹೊರತು ಕೃಷಿ ವ್ಯವಸ್ಥೆಯನ್ನು ಕಾರ್ಪೋರೆಟ್ ಕಂಪನಿಗಳ ವಶಕ್ಕೆ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಭೂಮಿ ಖರೀದಿ ನಿರ್ಬಂಧ ತೆಗೆದು ಹಾಕಿ ತಿದ್ದುಪಡಿ ಕಾಯ್ದೆಯಲ್ಲಿ ವ್ಯಕ್ತಿ 450 ಎಕರೆ ಭೂಮಿ ಖರೀದಿ ಮಾಡಬಹುದಾಗಿದೆ. ಕೃಷಿಯೇತರ ಉದ್ದೇಶಕ್ಕೆ ಬಳಸಬಹುದಾಗಿದೆ. ಹಿಂದಿನ ಜಮೀನ್ದಾರಿ, ಪಾಳೆಗಾರಿಗೆ ವ್ಯವಸ್ಥೆ ಮತ್ತೆ ಬರಲಿದೆ ಎಂದರು.
ರೈತಸಂಘ ಹಸಿರುಸೇನೆ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ತರುವ ಮೂಲಕ ಬಂಡವಾಳಶಾಹಿಗಳ ತೆಕ್ಕೆಗೆ ನೀಡುತ್ತಿದೆ. ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ ಎಂದು ಸುಳ್ಳು ಹೇಳಿ, ವೈಜ್ಞಾನಿಕ ಬೆಲೆ ವಿಚಾರದಿಂದ ನುಣುಚಿಕೊಳ್ಳುತ್ತಿದೆ. 28 ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಆಹಾರ ಭದ್ರತೆಗೆ ಪಟ್ಟುಬೀಳಲಿದೆ ಎಂದರು.
ಕಾಂಗ್ರೆಸ್ ಮುಖಂಡ ಎಂ.ಎಲ್. ಮೂರ್ತಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏನೇ ಮಾಡಿದರೂ ಆಲೋಚನೆ ಮಾಡದೆ ಮಾಡುತ್ತಾರೆ. ಚುನಾವಣೆ ವೇಳೆ ಮತದಾರರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ನಯಾ ಪೈಸೆಯೂ ಬರಲಿಲ್ಲ. ಜಿಎಸ್‌ಟಿಯಿಂದ ವ್ಯಾಪಾರಿಗಳಿಗೆ ಲಾಭವಾಗಲಿದೆ ಎಂದರು. ಆದರೆ, ವ್ಯಾಪಾರಿಗಳು ಜೆಎಸ್‌ಟಿ ಪಾವತಿ ಮಾಡಲೂ ಸಾಧ್ಯವಾಗುತ್ತಿಲ್ಲ. ಆಲೋಚನೆ ಮಾಡದೆ ಕೃಷಿ, ಎಪಿಎಂಸಿ, ಕಾರ್ಮಿಕ, ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಕಾರ್ಪೋರೆಟ್ ಸಂಸ್ಥೆಗಳ ಋಣ ತೀರಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐನ ಎಚ್.ಎಂ.ರೇಣುಕಾರಾಧ್ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ತನ್ನಿ ಎಂದು ಯಾರು ಬೇಡಿಕೆ ಇಟ್ಟಿದ್ದರು ಎಂದು ಪ್ರಶ್ನಿಸಿದರು.