ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಆಪ್ತ ಬೆಂಬಲಿಗರು ಆನೇಕಲ್ ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮಲಿಂಗಾ ರೆಡ್ಡಿ ಅವರ ಬೆಂಬಲಿಗರ ಪ್ರತಿಭಟನೆಯಿಂದಾಗಿ ಆನೇಕಲ್ ನಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು, ಟ್ರಾಫಿಕ್ ಜಾಮ್ ಆಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ತಮ್ಮ, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ರಾಮಲಿಂಗಾರೆಡ್ಡಿ ಅವರ ಆಪ್ತರು ನಿರ್ಧರಿಸಿದ್ದಾರೆ ಎಂದು ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ತಿಳಿಸಿದ್ದಾರೆ. ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಘೋಷಣೆ ಕೂಗಿದರು.
ಬೀದರ್ ನಲ್ಲೂ ರಾಮಲಿಂಗಾರೆಡ್ಡಿ ಪರ ಪ್ರತಿಭಟನೆ:
ಐದು ವರ್ಷಗಳ ಕಾಲ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಬೆಂಬಲಿಗರು ಬೀದರ್ ನಲ್ಲೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.