ಹಾವೇರಿ: ಜಿಲ್ಲೆಗೆ ಮಂಜೂರಾಗಿರುವ ಮೆಡಿಕಲ್ ಕಾಲೇಜ್‌ನ್ನು ನೆಲೋಗಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರದ ಜಮೀನಿನಲ್ಲಿ ನಿರ್ಮಿಸುವಂತೆ ಒತ್ತಾಯಿಸಿ ಈ ಭಾಗದ ಗ್ರಾಮಸ್ಥರು ಗುರುವಾರ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಹಾವೇರಿ ಜಿಲ್ಲೆಯ ಬಹುದಿನದ ಕನಸಾದ ಮೆಡಿಕಲ್ ಕಾಲೇಜ್ ಮಂಜೂರು ಮಾಡಿರುವುದು ಸಂತಸದ ವಿಷಯವಾಗಿದ್ದು, ನೆಲೋಗಲ್ಲ ಗ್ರಾಮದ ಸರ್ವೇ ನಂ. 102ರಲ್ಲಿ 44 ಎಕರೆ-32ಗುಂಟೆ ಸರ್ಕಾರಿ ಭೂಮಿ ಇದ್ದು, ಇದು ರಾಷ್ಟ್ರೀಯ ಹೆದ್ದಾರಿ ನಂ-48ಕ್ಕೆ 200ಮೀಟರ್ ಅಂತರದಲ್ಲಿ ಇದೆ. ಉತ್ತಮವಾದ ನೀರಿನ ಸೌಲಭ್ಯ ಹಾಗೂ ವಿದ್ಯುತ್ ಸೌಕರ್ಯ ಹೊಂದಿದೆ. ಹೀಗಾಗಿ ಇಲ್ಲೇ ಆರಂಭಿಸಬೇಕುಎಂದು ಹಾವೇರಿ, ನೆಲೋಗಲ್ಲ, ತೋಟದಯಲ್ಲಾಪುರ ಮತ್ತು ಹಾವೇರಿ ತಾಲೂಕಿನ ಸುತ್ತಮುತ್ತಲಿನ ಸಾರ್ವಜನಿಕರು ಒತ್ತಾಯಿಸಿದರು.
ನೆಲೋಗಲ್ಲ ಗ್ರಾಮದಲ್ಲಿರುವ ಜಾಗೆಯು ಎತ್ತರ ಪ್ರದೇಶದಲ್ಲಿದ್ದು ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಉತ್ತಮವಾಗಿದೆ. ಹಾವೇರಿ ನಗರಕ್ಕೆ 2.5ಕಿ.ಮೀ ದೂರ ಇದ್ದು ಸುತ್ತ ಮುತ್ತಲ ಗ್ರಾಮಗಳಿಗೆ ಹೃದಯ ಭಾಗವಾಗಿಯೂ ಇರುವ ಈ ಸ್ಥಳದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವುದರಿಂದ ಎಲ್ಲ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.
ಈ ಹಿಂದೆ ಈ ಜಾಗೆಯಲ್ಲಿ ಎಸ್ಪಿ ಕಚೇರಿ ನಿರ್ಮಿಸಲು ಮನವಿ ಸಲ್ಲಿಸಿದಾಗ ನಮ್ಮ ಮನವಿಯನ್ನು ನಿರ್ಲಕ್ಷಿಸಿ ಹಾವೇರಿ ಹೆಗ್ಗೇರಿ ಕೆರೆಯಲ್ಲಿ ಎಸ್.ಪಿ ಕಚೇರಿ ನಿರ್ಮಿಸಿ ವಸತಿ ಗೃಹಗಳು ಹಾಗೂ ತರಬೇತಿ ಮೈದಾನ ನೀರಿನಲ್ಲಿ ಮುಳುಗಡೆಯಾಗಿ ಪುನಃ ಹಾವೇರಿ ನಗರಕ್ಕೆ ಎಸ್‌ಪಿ ಕಚೇರಿ ಸ್ಥಳಾಂತರಗೊಂಡಿದೆ. ಹಾವೇರಿ ಜಿಲ್ಲೆಗೆ ಮಂಜೂರಾದ ಗ್ಲಾಸ್ ಹೌಸ್ ಹತ್ತಿರದ ಹೆಗ್ಗೇರಿ ಕೆರೆಯಲ್ಲಿ ನಿರ್ಮಿಸಿ ಅಪೂರ್ಣಗೊಂಡ ಕಾಮಗಾರಿಯೂ ನೀರಿನಲ್ಲಿ ಮುಳುಗಡೆಯಾಗಿದೆ. ಈಗ
ಮೆಡಿಕಲ್ ಕಾಲೇಜಿಗೆ ಗುರುತಿಸಿದ ಜಾಗೆಯೂ ತಗ್ಗು ಪ್ರದೇಶದಲ್ಲಿದ್ದು, ಮುಂದೊಂದು ದಿನ ಮೆಡಿಕಲ್ ಕಾಲೇಜ್ ಸಹ ಮುಳುಗಡೆಯಾಗಬಹುದು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಚಂದ್ರಶೇಖರ ದೊಡ್ಡಮನಿ, ಶಿವಯೋಗಿ ಹೊಸಗೌಡ್ರ, ಚನ್ನಪ್ಪ ಚಂದ್ರಾಪಟ್ಟಣ, ಗುದೆಪ್ಪ ಶೆಟ್ಟರ್, ವಿ.ಆರ್. ಪ್ರಭುಗೌಡ್ರ, ಮಲ್ಲನಗೌಡ ಹೊಂಬರಡಿ, ಎಸ್.ಬಿ. ಬೊಮ್ಮನಕಟ್ಟಿ, ಆರ್.ವಿ. ಕದಮನಹಳ್ಳಿ ಇತರರಿದ್ದರು.