Advertisement

ನಿಷೇಧಾಜ್ಞೆ ನಡುವೆ ಪ್ರತಿಭಟನೆ: ಬಿಜೆಪಿ ಕಾರ್ಯಕರ್ತರ ಬಂಧನ

12:14 PM Sep 07, 2017 | Team Udayavani |

ಮೈಸೂರು: ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿ, ನಿಷೇಧಾಜ್ಞೆ ಹೇರಿದ್ದರೂ ಮೆರವಣಿಗೆ ನಡೆಸಲು ಮುಂದಾದ ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಸೇರಿದಂತೆ ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

Advertisement

ಪೂರ್ವನಿಗದಿಯಂತೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಿಂದ ಬೈಕ್‌ ರ್ಯಾಲಿ ಹೊರಡಬೇಕಿತ್ತು. ಆದರೆ, ಕಾನೂನು-ಸುವ್ಯವಸ್ಥೆ ಹದಗೆಡುವ ಕಾರಣ ನೀಡಿ ನಗರ ಪೊಲೀಸ್‌ ಆಯುಕ್ತರು ಹಾಗೂ ಜಿಲ್ಲಾಧಿಕಾರಿಯವರು ಬೈಕ್‌ ರ್ಯಾಲಿಗೆ ಅನುಮತಿ ನಿರಾಕರಿಸಿ, ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಬೆಳಗ್ಗಿನಿಂದಲೇ ಹಾರ್ಡಿಂಜ್‌ ವೃತ್ತ ದಿಂದ ಕೆ.ಆರ್‌.ವೃತ್ತದವರೆಗೆ ವಾಹನ ಸಂಚಾರ ನಿರ್ಬಂಧಿಸಿದ ಪೊಲೀಸ್‌ ಎರಡೂ ವೃತ್ತಗಳ ದ್ವಾರಗಳಲ್ಲಿ ಬ್ಯಾರಿಕೇಡ್‌ಗಳನ್ನಿಟ್ಟು ನಾಕಾಬಂಧಿ ರಚಿಸಿ ಕಾವಲಿಗೆ ನಿಂತರು, ಇತ್ತ ಅಶೋಕ ರಸ್ತೆಯಿಂದಲೂ ಚಾಮರಾಜೇಂದ್ರ ವೃತ್ತ ಪ್ರವೇಶಿಸದಂತೆ ಬ್ಯಾರಿಕೇಡ್‌ಗಳನ್ನಿಡಲಾಗಿತ್ತು.

ಆದರೆ, ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ, ಬೈಕ್‌ರ್ಯಾಲಿ ಮಾಡಿಯೇ ತೀರುವುದಾಗಿ ಸವಾಲು ಹಾಕಿದ್ದ ಬಿಜೆಪಿ ಮುಖಂಡರು, ಕಾರ್ಯಕರ್ತರು, ಕಡೇ ಗಳಿಗೆಯಲ್ಲಿ ಬೈಕ್‌ ರ್ಯಾಲಿ ಕೈಬಿಟ್ಟು ಒಬ್ಬೊಬ್ಬರೇ ಬಂದು ಗಾಂಧಿ ಚೌಕದಲ್ಲಿ ಜಮಾಯಿಸಿದರು. ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಸೇರಿದ ನಂತರ ಸಂಸದ ಪ್ರತಾಪ್‌ ಸಿಂಹ ನೇತೃತ್ವದಲ್ಲಿ ದೊಡ್ಡ ಗಡಿಯಾರ ಕಡೆಯಿಂದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಕಡೆಗೆ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟರು. ಎಚ್ಚೆತ್ತ ಪೊಲೀಸರು, ಪ್ರತಿಭಟನಾನಿರತರನ್ನು ತಡೆದು 3 ಸಾರಿಗೆ ಬಸ್‌ಗಳಲ್ಲಿ ಸಂಸದ ಪ್ರತಾಪ್‌ಸಿಂಹ, ಮಾಜಿ ಸಚಿವ ಎಸ್‌.ಎ.ರಾಮದಾಸ್‌  ಸೇರಿ ಹಲವರನ್ನು ಬಂಧಿಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌, ಪ್ರಧಾನ ಕಾರ್ಯದರ್ಶಿಗಳಾದ ನಂದೀಶ್‌ ಪ್ರೀತಂ, ಎಚ್‌.ವಿ.ರಾಜೀವ್‌, ಸತೀಶ್‌, ನಗರ ಯುವಮೋರ್ಚಾ ಅಧ್ಯಕ್ಷ ಗೋಕುಲ್‌ ಗೋವರ್ಧನ್‌, ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಲ್‌.ಆರ್‌.ಮಹದೇವಸ್ವಾಮಿ ಸೇರಿದಂತೆ ನಗರಪಾಲಿಕೆ ಬಿಜೆಪಿ ಸದಸ್ಯರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನು ಬಂಧಿಸಿದರು. ಈ ವೇಳೆ ವಾಗ್ವಾದಕ್ಕಿಳಿದ ಕಾರ್ಯಕರ್ತರನ್ನು ಪೊಲೀಸರೇ ಹೊತ್ತೂಯ್ದು ಬಸ್‌ನ ಒಳಗೆ ತಳ್ಳಿದರು. 

ಬೈಕ್‌ ಏರಿಬಂದ ರಾಮದಾಸ್‌ ಬಂಧನ: ಬಿಜೆಪಿ ಕಾರ್ಯಕರ್ತರು ಕಡೆಗಳಿಗೆಯಲ್ಲಿ ಬೈಕ್‌ ರ್ಯಾಲಿ ಕೈಬಿಟ್ಟು ಗಾಂಧಿಚೌಕದಿಂದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಕಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಾಗ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಹೆಲ್ಮೆಟ್‌ ಧರಿಸಿ ಕಾರ್ಯಕರ್ತರೊಬ್ಬರ ಬೈಕ್‌ನಲ್ಲಿ ಹಿಂಬದಿ ಸವಾರರಾಗಿ ಬಂದು ಗಮನಸೆಳೆದರು. ಕಾರ್ಯಕರ್ತರ ಬೆಂಗಾವಲಿನೊಂದಿಗೆ ಬಹುದೂರ ಸಾಗಿ ಬಂದ ರಾಮದಾಸ್‌ ಅವರನ್ನು ಪೊಲೀಸರು ವಶಕ್ಕೆ ಪಡೆದರು.

Advertisement

“ಸಿದ್ದರಾಮಯ್ಯ ವರ್ತನೆ ಟಿಪ್ಪು ಸಂತತಿಯಂತಿದೆ’ 
ಮೈಸೂರು:
ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ತಡೆಯುವಲ್ಲಿ ವಿಫ‌ಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಜಾಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕುವ ಕೆಲಸದಲ್ಲಿ ತೊಡಗಿ, ಟಿಪ್ಪು$ಸುಲ್ತಾನ್‌ ಸಂತತಿಯಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದರು.

ಉದ್ದೇಶಿತ ಮಂಗಳೂರು ಚಲೋ ಬೈಕ್‌ ರ್ಯಾಲಿ ಕೈಬಿಟ್ಟು ಮೆರವಣಿಗೆ ನಡೆಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರು. ರಾಜ್ಯ ಸರ್ಕಾರ ಪೊಲೀಸ್‌ ಬಲ ಪ್ರಯೋಗಿಸಿ ನಮ್ಮ ಹೋರಾಟವನ್ನು ಹತ್ತಿಕ್ಕಿದರೂ ಹೋರಾಟ ಮುಂದುವರಿಯಲಿದೆ. ಸಚಿವ ರಮಾನಾಥ್‌ ರೈ ರಾಜೀನಾಮೆ ಕೊಡುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next