ಬೈಲಹೊಂಗಲ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಬಾಂಧವರು ರಾಷ್ಟ್ರಗೀತೆ ಹಾಡಿ, ಭಾರತ ಮಾತಾಕೀ ಜೈ, ಒಂದೇ ಮಾತರಂ ಘೋಷಣೆ ಮೊಳಗಿಸಿ, ಹಿಂದೂ-ಮುಸ್ಲಿಂ ಬಾಂಧವರೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರು ಎಂಬ ಸಂದೇಶ ಸಾರಿದರು.
ಪಟ್ಟಣದ ಅಂಬೇಡ್ಕರ್ ಉದ್ಯಾನ ಎದುರು ವೇದಿಕೆ ಹಾಕಿ ಪ್ರತಿಭಟನೆಗಿಳಿದಿದ್ದ ಅಪಾರ ಸಂಖ್ಯೆಯ ಮುಸ್ಲಿಮರು ದೇಶದಲ್ಲಿ ಏನು ಆಗುತ್ತದೆಯೋ, ಬಿಡುತ್ತದೆಯೋ ಗೊತ್ತಿಲ್ಲ. ಆದರೆ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರಕೇಸರಿ ಅಮಟೂರು ಬಾಳಪ್ಪನ ಪುಣ್ಯ ಭೂಮಿಯಾದ ಬೈಲಹೊಂಗಲ ನಾಡಿನಲ್ಲಿ ಯಾರೂ ಯಾವುದೇ ಕಾರಣಕ್ಕೂ ಜಾತೀಯತೆ, ಧರ್ಮಾಂಧತೆಗೆ ಸಿಲುಕಿ ಕೋಮು ಸೌಹಾರ್ದತೆಗೆ ಧಕ್ಕೆ ಆಗದಂತೆ ಜಾಗೃತರಾಗಿರೋಣವೆಂದು ಶಪಥ ಮಾಡಿದರು.
ಮುಸ್ಲಿಂ ಸಮಾಜದ ಹಿರಿಯ ವಕೀಲ ಝಡ್.ಎ. ಗೋಕಾಕ ಮಾತನಾಡಿ, ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ಕೊಟ್ಟಿದೆ. ಅದರ ಸದ್ಬಳಕೆ ಅಗತ್ಯವಿದೆ. ಅದನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳಬಾರದು. ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಆಗುವ ಲಾಭ, ಹಾನಿ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು. ಧರ್ಮಗುರು ಶೌಕತ್‌ಅಲಿ ಭಾದಿ ಮಾತನಾಡಿ, ಭಾರತ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಭಾರತಕ್ಕೆ ಆಪತ್ತು ಬಂದಾಗ ಭಾರತೀಯ ಪುಣ್ಯ ನೆಲದ ಹಿಂದೂ, ಮುಸ್ಲಿಂ ಬಾಂಧವರು ಸೇರಿ ದೇಶದ ರಕ್ಷಣೆಗೆ ಕಂಕಣ ಬದ್ಧರಾಗಿರಬೇಕು. ಪ್ರಾಣ ಹೋದರೂ ಭಾರತಾಂಬೆ ರಕ್ಷಣೆಗೆ ಬದ್ಧರಾಗಿರಬೇಕು ಎಂದರು.
ಶಾಸಕ ಮಹಾಂತೇಶ ಕೌಜಲಗಿ, ಜಿಪಂ ಸದಸ್ಯ ಶಂಕರ ಮಾಡಲಗಿ, ರಫೀಕ್ ಬಡೇಘರ ಮಾತನಾಡಿದರು. ಮುಸ್ಲಿಂ ಸಮಾಜದ ಮುಖಂಡರಾದ ಡಾ. ಐಜಾಜ್ ಬಾಗೇವಾಡಿ, ನಿಸ್ಸಾರಅಹ್ಮದ ತಿಗಡಿ, ಮಹ್ಮದ ರಫೀಕ ನಾಯ್ಕ, ಆಲಮ್ ಖಾರೆಖಾಜಿ, ಅಬ್ದುಲ್ ರಹಿಮ್ ಹುಬ್ಬಳ್ಳಿ, ದಾವುಲಸಾಬ ಕಂದಗೋಳಿ, ಜಿ.ಡಿ. ಬಾಗವಾನ, ಜಿಪಂ ಸದಸ್ಯ ಅನಿಲ ಮ್ಯಾಕಲಮರ್ಡಿ, ಶರೀಫ ಮೊಖಾಶಿ, ಬಾಬು ಸುತಗಟ್ಟಿ, ಫಾರುಖ್ ತಿಗಡಿ, ಅಲಲಾ ಯುವಕ ಸಂಘ ಪದಾ ಧಿಕಾರಿಗಳು ಇದ್ದರು. ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮೂಲಕ ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದರು.
ಡಿವೈಎಸ್ಪಿ ಜೆ.ಎಂ. ಕರುಣಾಕರಶೆಟ್ಟಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.