Advertisement

ನಿಜವಾದ ದಲಿತ ಬಿಜೆಪಿಯಲ್ಲಿ ಇರಲಾರ

10:55 AM Jan 29, 2020 | Suhan S |

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ತತ್ವ, ಆದರ್ಶ ಹಾಗೂ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡನಿಜವಾದ ದಲಿತನಾಗಿದ್ದರೆ ಯಾರೊಬ್ಬರು ಬಿಜೆಪಿಯಲ್ಲಿ ಇರುತ್ತಿರಲಿಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Advertisement

ಸಿಎಎ, ಎನ್‌ಆರ್‌ಸಿ ವಿರೋಧಿಸಿ ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ ಹಾಗೂ ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಿಸುವುದಕ್ಕಾಗಿಯೇ ಬಂದಿದ್ದೇವೆ, ಅಂಬೇಡ್ಕರ್‌ರ ಮೂರ್ತಿಗಳನ್ನು ಭಗ್ನಗೊಳಿಸಿ ಎನ್ನುವ ದಲಿತ ವಿರೋಧಿ ಬಿಜೆಪಿಗೆ ಡಾ| ಅಂಬೇಡ್ಕರ್‌ ಬಗ್ಗೆ ಗೌರವ ಇಲ್ಲ ಎಂಬುದು ಸಾಬೀತಾಗಿದೆ ಎಂದರು.

ನಿಜವಾಗಿಯೂ ಬಾಬಾಸಾಹೇಬರ ಆದರ್ಶ, ಮೌಲ್ಯಗಳನ್ನು ಅಳವಡಿಸಿಕೊಂಡು ಅವರು ನೀಡಿದ ಭಿಕ್ಷೆಯಲ್ಲಿ ಜೀವಿಸುತ್ತಿದ್ದರೆ ಬಿಜೆಪಿ ಬಿಟ್ಟು ಹೊರಬರುತ್ತಿದ್ದರು. ದಲಿತ ವಿರೋಧಿ ಪಕ್ಷದಲ್ಲಿ ಸ್ವಾಭಿಮಾನ ಬಿಟ್ಟು ಅಧಿಕಾರಕ್ಕೆ ಉಳಿದುಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ಧಾಳಿ ನಡೆಸಿದರು. ಈ ದೇಶದಲ್ಲಿ ಮೂಲ ನಿವಾಸಿಗಳು ನಾವು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಮ್ಮ ಪೌರತ್ವ ಸಾಬೀತುಪಡಿಸಲಿ. ಧರ್ಮ, ಜಾತಿ, ಲಿಂಗ ಆಧರಿಸಿ ಪೌರತ್ವ ನೀಡಬೇಕು ಎಂದು ಸಂವಿಧಾನ ಹೇಳಿಲ್ಲ. ಆದರೆ ಕೇಂದ್ರ ಸರಕಾರ ಸಂವಿಧಾನವನ್ನೇ ಬದಲಿಸಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡಲು ಮುಂದಾಗಿದೆ ಎಂದು ದೂರಿದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಮುಸ್ಲಿಂ ಧರ್ಮವನ್ನು ಹೊರಗಿಟ್ಟು ಪೌರತ್ವ ನೀಡುತ್ತಿರುವುದು ಸಂವಿಧಾನ ಬಾಹಿರ. ಇದನ್ನು ವಿರೋಧ ಮಾಡುವವರ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಧರ್ಮಾಧಾರಿತ ಆಡಳಿತ ನಡೆಯುವುದಿಲ್ಲ ಎಂದರು.

ಇಸ್ಮಾಯಿಲ್‌ ತಮಟಗಾರ ಮಾತನಾಡಿ, ಮುಸ್ಲಿಂ ಜನರಿಗೆ ಕೇಂದ್ರ ಸರಕಾರ ಅನ್ಯಾಯ ಮಾಡಲು ಹೊರಟಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಧರ್ಮದ ಜನರಿಗೂ ತೊಂದರೆ ಕೊಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕೇಂದ್ರ ಸರಕಾರ ಯಾವುದೇ ಧರ್ಮದ ಮೇಲೆ ದೌರ್ಜನ್ಯ ಮಾಡಿದರೂ ಮುಸ್ಲಿಂ ಸಮುದಾಯ ನೊಂದವರ ಪರವಾಗಿ ನಿಲ್ಲುತ್ತದೆ ಎಂದು ಹೇಳಿದರು.

Advertisement

ತಹಶೀಲ್ದಾರ್‌ ಶಿಶಿಧರ ಮಾಡ್ಯಾಳ ಮನವಿ ಸ್ವೀಕರಿಸಿದರು. ಪಿತಾಂಬ್ರಪ್ಪ ಬಿಳಾರ, ಗುರುನಾಥ ಉಳ್ಳಿಕಾಶಿ ಮಾತನಾಡಿದರು. ಆಲ್ಕೋಡ ಹನುಮಂತಪ್ಪ, ಸದಾನಂದ ಡಂಗನವರ, ಅನಿಲ ಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರು, ಗಣೇಶ ಟಗರಗುಂಟಿ, ಮೋಹನ ಅಸುಂಡಿ, ಅಲ್ತಾಫ್‌ ಕಿತ್ತೂರು, ಬಷೀರ್‌ ಅಹ್ಮದ್‌ ಗುಡಮಾಲ್‌, ಅನ್ವರ್‌ ಮುಧೋಳ, ದಶರಥ ವಾಲಿ, ದೀಪಾ ಗೌರಿ, ಸುಧಾ ಮಣಿಕುಂಟ್ಲಾ, ವಿಜನಗೌಡ ಪಾಟೀಲ, ವೆಂಕಟೇಶ ಮೇಸ್ತ್ರಿ, ಬಾಬಾಜಾನ್‌ ಮುಧೋಳ, ದೇವಾನಂದ ರತ್ನಾಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next