ಚನ್ನಪಟ್ಟಣ: ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸಲು ಹೊರಟಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರ ನಡೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಅಂಚೆ ಕಚೇರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ವಿದೇಶಿ ಪ್ರವಾಸಿಗರನ್ನು ಸೆಳೆಯಲು ಗೋವಾ, ಶ್ರೀಲಂಕಾ ಮಾದರಿಯಲ್ಲಿ ಜೂಜು ಕೇಂದ್ರ (ಕ್ಯಾಸಿನೋ) ಪ್ರಾರಂಭಿಸಲು ಹೊರಟಿರುವ ಸಚಿವರ ಧೋರಣೆ ವಿರುದ್ಧ ಕಿಡಿಕಾರಿದರು. ಸಚಿವರು ತಮ್ಮ ನಿಲುವು ಕೈಬಿಡಬೇಕು. ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.
ಕಕಜವೇ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತಾನಾಡಿ, ನಾಡಿನ ಸಂಸ್ಕೃತಿ, ಪರಂಪರೆ ತಿಳಿಸಿ ಮತ್ತು ಪ್ರವಾಸಿ ತಾಣ ಅಭಿವೃದ್ಧಿಪಡಿಸಿ, ಉನ್ನತಿಕರಿಸಿ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸ ಬೇಕಾದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಗೋವಾ, ಶ್ರೀಲಂಕಾ ಮಾದರಿಯಲ್ಲಿ ಕ್ಯಾಸಿನೋ ಜೂಜು ಕೇಂದ್ರ ಸ್ಥಾಪನೆ ಮಾಡಲು ಹೊರಟಿರುವುದು ನಿಜಕ್ಕೂ ಖಂಡನೀಯ. ಸಚಿವರು ಈ ಕೂಡಲೇ ತಮ್ಮ ನಿಲುವು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರವನ್ನು ಬೀಳಿಸಲು ಸಹಕರಿಸಿದ ಜೂಜು ಕಿಂಗ್‌ಪಿನ್‌ಗಳ ಋಣ ತೀರಿಸಲು ಈ ಸರ್ಕಾರ ಈ ನಿಲುವು ತೆಗೆದುಕೊಂಡಂತಾಗಿದೆ. ಹಣ ಸಂಪಾದನೆಗೆ ಪ್ರವಾಸಿ ತಾಣಗಳನ್ನು ಕ್ಯಾಸಿನೋ ಕೇಂದ್ರಗಳನ್ನಾಗಿ ಮಾಡಿದರೆ, ನಾಡಿನಲ್ಲಿ ಅರಾಜಕತೆ ಉಂಟಾಗುತ್ತದೆ. ಯುವ ಜನರನ್ನು ಜೂಜು, ಮದ್ಯದೆಡೆಗೆ ಸೆಳೆಯುವಂತಾಗುತ್ತದೆ. ನಮ್ಮ ಸಂಸ್ಕೃತಿ, ಪರಂಪರೆ ನಾಶಕ್ಕೆ ಕಾರಣವಾಗುತ್ತದೆ. ಅಪರಾಧ ಕೃತ್ಯಗಳು ಹೆಚ್ಚಾಗುತ್ತದೆ. ಸರ್ಕಾರ ಈ ಬಗ್ಗೆ ಚಿಂತಿಸಿ, ತಮ್ಮ ನಿಲುವು ಕೈಬಿಡಬೇಕು ಎಂದರು.
ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್ ಗೌಡ, ಡಾ.ರಾಜ್ ಕಲಾಬಳಗದ ಅಧ್ಯಕ್ಷ ಎಚ್. ಮಂಜುನಾಥ್, ಮಾಜಿ ನಗರಸಭೆ ಸದಸ್ಯ ಎಸ್. ಉಮಾಶಂಕರ್, ಜೆ.ಸಿ.ಬಿ.ಲೋಕೇಶ್, ಮಹಿಳಾ ವಿಭಾಗದ ರೋಸಿ, ಟೆಂಪೋ ರಾಜೇಶ್, ನರಸಿಂಹ, ಚಿಕ್ಕಣ್ಣ, ಪ್ರಕಾಶ್,ಸತೀಶ್, ಶಿವಣ್ಣ, ನಾಗೇಶ್, ಸಿದ್ದಪ್ಪ ಮುಂತಾದವರು ಭಾಗವಹಿಸಿದ್ದರು.