Advertisement

ಈಗ ಜಿಪಂ ಅಧ್ಯಕ್ಷೆ ವಿರುದ್ಧ ಪ್ರತಿಭಟನೆ

03:25 PM Dec 15, 2018 | |

ದಾವಣಗೆರೆ: ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಸ್‌. ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ ವಿರುದ್ಧ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಎಸಿಬಿಗೆ ನೀಡಿರುವ ದೂರು ಹಿಂಪಡೆಯುವ ಜೊತೆಗೆ ಬಹಿರಂಗ ಕ್ಷಮೆ ಕೋರಲು ಆಗ್ರಹಿಸಿ ವಿವಿಧ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕೂಲಿ ಕಾರ್ಮಿಕರು ಶುಕ್ರವಾರ ಜಿಲ್ಲಾ ಪಂಚಾಯತ್‌ ಎದುರು ದಿಢೀರ್‌ ಪ್ರತಿಭಟಿಸಿದರು.

Advertisement

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದವರು ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೇ ದೂರು ಹಿಂಪಡೆದು, ಕೂಲಿಕಾರರಿಗೆ ಆಗುವ ಸಮಸ್ಯೆ ತಪ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬೆಂಗಳೂರಿಗೆ ತೆರಳಿರುವ ಜಿಲ್ಲಾ ಪಂಚಾಯತ್‌ ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಎಸಿಬಿಗೆ ನೀಡಿರುವ ದೂರು ಹಿಂಪಡೆಯುವ ಜೊತೆಗೆ ಬಹಿರಂಗ ಕ್ಷಮೆ ಕೋರುವ ತನಕ ಜಿಲ್ಲಾ ಪಂಚಾಯತ್‌ ಎದುರು ಹೋರಾಟ ಮುಂದುವರೆಸುವುದಾಗಿ ಕೆಲವರು ಎಚ್ಚರಿಸಿದರು. ಇನ್ನು ಕೆಲವರು ಶನಿವಾರ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್‌ ಕಚೇರಿಗಳಿಗೆ ಬೀಗ ಜಡಿದು, ಹೋರಾಟ ನಡೆಸಲಾಗುವುದು ಎಂದರು.

ಜಿಪಂ ಅಧ್ಯಕ್ಷರು ಎರಡು ದಿನ ದಾವಣಗೆರೆಗೆ ಬರುವುದಿಲ್ಲ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ, ಅಂತಿಮವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಪ್ರತಿಭಟನಾಕಾರರು, ಸಿಇಒ ಎಸ್‌. ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್‌.ಷಡಕ್ಷರಪ್ಪ ಇಬ್ಬರು ಸಹ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜಗಳೂರು ತಾಲೂಕಿನ ಅನೇಕ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಆಲಿಸಿ, ಟ್ಯಾಂಕರ್‌ ಇಲ್ಲವೇ ಖಾಸಗಿಯವರಿಂದ ಕೊಳವೆಬಾವಿ ಬಾಡಿಗೆ ಆಧಾರದಲ್ಲಿ
ನೀರು ಒದಗಿಸುವ ವ್ಯವಸ್ಥೆ ಮಾಡಿದ್ದಾರೆ.

Advertisement

ಕೆಲವು ಗ್ರಾಮಗಳಲ್ಲಿ ಬೋರ್‌ವೆಲ್‌ ಕೊರೆಸಿ, ನೀರಿನ ವ್ಯವಸ್ಥೆ ಮಾಡಿಸಿದ್ದಾರೆ. ಅನೇಕ ಕಡೆ ಶೌಚಾಲಯ ನಿರ್ಮಾಣಕ್ಕೆ
ಕಾರಣರಾಗಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿರುವ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಒಂದೇ ಒಂದು ಹಳ್ಳಿಗೆ ಭೇಟಿ ನೀಡಿಲ್ಲ. ಜನರ ಸಮಸ್ಯೆ ಕೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಮಾತು ಕೇಳುವುದಿಲ್ಲ.

ಹೇಳಿದ ಕೆಲಸ ಮಾಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಈ ರೀತಿ ದೂರು ದಾಖಲಿಸಿದರೆ ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಮುಂದೆ ಬರುವುದೇ ಇಲ್ಲ. ಒಂದು ವೇಳೆ ಅವ್ಯವಹಾರ, ಭ್ರಷ್ಟಾಚಾರ ನಡೆದಿದ್ದರೆ ಆಯಾಯ ಗ್ರಾಮ ಪಂಚಾಯತ್‌ಗಳ ವಿರುದ್ಧ ತನಿಖೆ ನಡೆಸಲಿ. ಅದರಿಂದ ಇತರೆ ಗ್ರಾಮ ಪಂಚಾಯತ್‌ಗಳಲ್ಲಿ ತೊಂದರೆ ಉಂಟು ಮಾಡಬಾರದು.

ಗ್ರಾಮ ಪಂಚಾಯತ್‌ ಸದಸ್ಯರು ಭ್ರಷ್ಟಾಚಾರ, ಅವ್ಯವಹಾರದ ಬಗ್ಗೆ ಹೇಳಿದ್ದಾರೆ ಎಂದು ಅಧ್ಯಕ್ಷರು ಹೇಳಿದ್ದಾರೆ. ಅದು ಯಾವ ಗ್ರಾಮ ಪಂಚಾಯತಿಯವರು ಎಂಬುದರ ದಾಖಲೆ ತೋರಿಸಲಿ. ಅಧ್ಯಕ್ಷರು ಎಸಿಬಿಗೆ ದೂರು ಸಲ್ಲಿಸುವ ಮುನ್ನ ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಬೇಕಿತ್ತು ಎಂದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅವ್ಯವಹಾರ ಆಗಿದೆ ಎಂದು ಅಧ್ಯಕ್ಷರು ಎಸಿಬಿಗೆ ದೂರು ಸಲ್ಲಿಸಿದ್ದಾರೆ. ತನಿಖೆ ನಡೆಸಬೇಕು ಎಂದು ಮೂರು ತಿಂಗಳು ಯಾವುದೇ ಕೆಲಸಕ್ಕೆ ಅವಕಾಶವನ್ನೇ ನೀಡುವುದಿಲ್ಲ. ಮೊದಲೇ ಮಳೆ, ಬೆಳೆ ಇಲ್ಲದ ಬರಗಾಲದಲ್ಲಿ ಇರುವ ಕೆಲಸವೂ ಇಲ್ಲದಂತಾಗುತ್ತದೆ.

ಕೂಲಿ ಮಾಡುವರಿಗೆ ಸಮಸ್ಯೆ ಆಗುತ್ತದೆ. ಅಧ್ಯಕ್ಷರು, ಅಧಿಕಾರಿಗಳು ನಡುವೆ ಏನೇ ಆಗಲಿ ಅದರಿಂದ ಕೂಲಿ ಮಾಡುವರಿಗೆ ತೊಂದರೆ ಆಗಬಾರದು. ಕೆಲಸಕ್ಕೆ ಯಾವುದೇ ಕಾರಣಕ್ಕೂ ಅಡ್ಡಿ ಆಗಬಾರದು. ಕೆಲಸ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಹಾಲೇಕಲ್‌, ದೇವಿಕೆರೆ, ದಿದ್ದಗಿ, ಬಸವನಕೋಟೆ, ಬಿದರಕೆರೆ, ಮಡ್ರಳ್ಳಿ(ಗುರುಸಿದ್ದಾಪುರ), ಹೊಸಕೆರೆ ಇತರೆ ಗ್ರಾಮ ಪಂಚಾಯತ್‌ನ ಜನಪ್ರತಿನಿಧಿಗಳು, ಕೂಲಿ ಕಾರ್ಮಿಕರು ಇದ್ದರು. 

ಪ್ರತಿಭಟನೆಯ ಪ್ರಾರಂಭದ ಸಮಯದಲ್ಲಿ ಜಿಲ್ಲಾ ಪಂಚಾಯತ್‌ ನಲ್ಲೇ ಇದ್ದ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಎಸ್‌. ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ ಬೇರೆ ಕಡೆಯಿಂದ ಹೊರ ಹೋದರು.

Advertisement

Udayavani is now on Telegram. Click here to join our channel and stay updated with the latest news.

Next