Advertisement

ಸಮಸ್ಯೆ ಪರಿಹರಿಸದಿದ್ದರೆ 15ರಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

11:26 AM Aug 02, 2019 | Team Udayavani |

ಚಾಮರಾಜನಗರ: ಗಿರಿಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಸ್ವಾತಂತ್ರ್ಯ ದಿನದಂದು ಜಿಲ್ಲಾಧಿಕಾರಿ ಕಚೇರಿ ಬಳಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ. ಪುಟ್ಟಸಿದ್ಧಶೆಟ್ಟಿ ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗನಬೆಟ್ಟ, ಮಹದೇಶ್ವರ ಬೆಟ್ಟದಲ್ಲಿ ಗಿರಿಜನರು ಅರಣ್ಯ ಉತ್ಪನ್ನಗಳನ್ನವಲಂಬಿಸಿ ಜೀವನೋಪಾಯ ಮಾಡುತ್ತಿದ್ದಾರೆ. ಅವರಿಂದ ಕಾಡಿನ ಸಂರಕ್ಷಣೆಗೆ ತೊಂದರೆಯಾಗಿಲ್ಲ. ಆದರೂ ಅರಣ್ಯ ಇಲಾಖೆಯವರು ಅವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಅರಣ್ಯದಿಂದ ಹೊರತಂದ ಬಳಿಕ ಅವರಿಗೆ ಸರಿಯಾದ ಪುನರ್ವಸತಿ ಸಹ ಕಲ್ಪಿಸಿಲ್ಲ. ಹೀಗಾಗಿ ಅವರ ಬದುಕು ಮೂರಾಬಟ್ಟೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಭಿವೃದ್ಧಿಗಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ: ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಅರಣ್ಯ, ಕಂದಾಯ ಇಲಾಖೆಗಳಿದ್ದರೂ ಗಿರಿಜನರ ಅಭಿವೃದ್ಧಿಗಾಗಿ ಸಮರ್ಪಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿಲ್ಲ. ಸೋಲಿಗರು, ಕಾಡು ಕುರುಬರು, ಜೇನು ಕುರುಬರ ಬದುಕು ಬಹಳ ಕಷ್ಟಕರವಾಗಿದೆ. ಅವರು ವಾಸಿಸುವ ಪೋಡುಗಳು, ಹಾಡಿಗಳು ಹೀನಸ್ಥಿತಿಯಲ್ಲಿವೆ. ಅಲ್ಲಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸೌಲಭ್ಯಗಳಿಲ್ಲ. ತಲೆಯ ಮೇಲೆ ಭದ್ರವಾದ ಸೂರಿಲ್ಲ. ಅವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಲು ಶಕ್ತರಾಗಿಲ್ಲ. ಹೀಗಾಗಿ ಸರ್ಕಾರಗಳು ಅವರನ್ನು ಕಡೆಗಣಿಸಿವೆ ಎಂದು ಆರೋಪಿಸಿದರು.

ಗಿರಿಜನರು ಸ್ಥಿತಿ ಅತಂತ್ರ: ಗಿರಿಜನರು ಅರಣ್ಯದಿಂದ ಹೊರಬಂದರೆ ಅವರಿಗೆ ಎಲ್ಲ ರೀತಿಯ ಸೌಲಭ್ಯ ಕೊಡುವುದಾಗಿ ಆಶ್ವಾಸನೆ ನೀಡುತ್ತಾರೆ. ಆದರೆ, ಈಗ ಹೊರತಂದಿರುವ ಗಿರಿಜನರಿಗೆ ಜಮೀನು, ವಸತಿ, ಬೇಸಾಯಕ್ಕೆ ಬೇಕಾದ ಸವಲತ್ತುಗಳನ್ನು ನೀಡಿಲ್ಲ. ಅತ್ತ ಅರಣ್ಯದಲ್ಲೂ ಇಲ್ಲದೇ ಇತ್ತ ನಾಡಿನಲ್ಲೂ ಜೀವಿಸಲಾಗದೆ ಅವರ ಸ್ಥಿತಿ ಅತಂತ್ರವಾಗಿದೆ ಎಂದು ಪುಟ್ಟಸಿದ್ಧಶೆಟ್ಟಿ ವಿಷಾದಿಸಿದರು.

600 ಹಾಡಿಗಳಲ್ಲಿ ಸೌಲಭ್ಯವಿಲ್ಲ: ಉತ್ತರ ಖಂಡ, ಜಾರ್ಖಂಡ್‌, ಮಹಾರಾಷ್ಟ್ರಗಳಲ್ಲಿ ಗಿರಿಜನರಿಗೆ ಉತ್ತಮವಾದ ಪುನರ್ವಸತಿ ಕಲ್ಪಿಸಲಾಗಿದೆ. ಆದರೆ, ಕರ್ನಾಟಕದ ಮೈಸೂರು, ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶಗಳ ಗಿರಿಜನರಿಗೆ ಸೂಕ್ತ ಪುನರ್ವಸತಿ ನೀಡಿಲ್ಲ. ಗಿರಿಜನರ ನಿರ್ದೇಶನಾಲಯಕ್ಕೆ ಗಿರಿಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. 600 ಹಾಡಿಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಅವರಿಗೆ ಜಮೀನು, ಮನೆಯಿಲ್ಲ, ಸರ್ಕಾರ ಅವರನ್ನು ಮನುಷ್ಯರಂತೆ ಕಾಣುತ್ತಿಲ್ಲ ಎಂದು ಆರೋಪಿಸಿದರು.

Advertisement

ಇದಕ್ಕೆ ಜಿಲ್ಲಾಧಿಕಾರಿಯವರೇ ನೇರ ಹೊಣೆಯಾಗಿದ್ದಾರೆ. ಅವರು ಗಿರಿಜನರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಸಭೆ ಕರೆದು ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಗಿರಿಜನರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಆ. 15ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಪುಟ್ಟಸಿದ್ಧಶೆಟ್ಟಿ ತಿಳಿಸಿದರು.

ಈ ವೇಳೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪಶೆಟ್ಟಿ, ಟಿ.ಕೆ. ಹೊನ್ನಪ್ಪ, ನಾಗರಾಜು, ಪುರುಷೋತ್ತಮ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next