ಬೀದರ: ದಲಿತರ ಮೇಲೆ ದೌರ್ಜನ್ಯ, ಕೊಲೆ ಮತ್ತು ಸಂವಿಧಾನದ ಬಗ್ಗೆ ಅವಹೇಳಕಾರಿ ಹೇಳಿಕೆ ಖಂಡಿಸಿ ನಗರದಲ್ಲಿ ಗುರುವಾರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ ವೃತ್ತದಲ್ಲಿ ಸೇರಿದ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಅಲ್ಲಿಂದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಮಹಾರಾಷ್ಟ್ರದ ಭೀಮ, ಕೋರೆಗಾಂವ ಯುದ್ಧದಲ್ಲಿ ರೆಜಿಮೆಂಟ್ ಸೈನಿಕರು ಪೇಶ್ವೆ ಸೇನೆಯನ್ನು ಸೋಲಿಸಿದ ಸ್ಮರಣಾರ್ಥ ಕೋರೆಗಾಂವದಲ್ಲಿ ಆಯೋಜಿಸಿದ್ದ 200ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿವಿಧೆಡೆಯಿಂದ ದಲಿತರು ಭಾಗವಹಿಸಿದ್ದು, ಬಿಜೆಪಿಯ ಪ್ಯಾಸಿಸ್ಟ್ ಶಕ್ತಿಗಳಿಗೆ ಸಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ಪೂಜಾ ಜಿಲ್ಲೆಯ ವಡುಬುದ್ರಾ ಗ್ರಾಮದಲ್ಲಿ ಭಗವಾ ಬ್ರಿಗೇಡ್ ಕಾರ್ಯಕರ್ತರು ಮತ್ತು ಸಂಘ ಪರಿವಾರದವರು ಅಲ್ಲಿನ ದಲಿತರ ಮೇಲೆ ಹಲ್ಲೆ, ಹಿಂಸಾಚಾರ ನಡೆಸಿ ಯುವಕನನ್ನು ಕೊಲೆ ಮಾಡಿದ್ದಾರೆ. ಈ ಘಟನೆಗೆ ಮಹಾರಾಷ್ಟ್ರ ಸಿಎಂ ಕುಮ್ಮಕ್ಕು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನ ಬದಲಾಯಿಸುವುದಾಗಿ ನೀಡಿದ ಹೇಳಿಕೆ ಖಂಡನೀಯ. ಈ ವಿಷಯದಲ್ಲಿ ಪ್ರಧಾನಮಂತ್ರಿ ಮೌನ ವಹಿಸಿದ್ದಾರೆ. ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ಇಂಥ ಘಟನೆಗಳು ಮತ್ತೂಮ್ಮೆ ಘಟಿಸದಂತೆ ಕ್ರಮ ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿ ತಿಳಿಸಿದ್ದಾರೆ.
ಮನವಿ ಪತ್ರಕ್ಕೆ ಒಕ್ಕೂಟದ ಅಧ್ಯಕ್ಷ ಬಾಬುರಾವ ಪಾಸ್ವಾನ್, ದಲಿತ ಪರ ಸಂಘಟನೆಗಳ ಪ್ರಮುಖರಾದ ರಾಜಕುಮಾರ ಮೂಲಭಾರತಿ, ಅರುಣ ಕುದರೆ, ಅಶೋಕಕುಮಾರ ಮಾಳಗೆ, ಶ್ರೀಪತರಾವ್ ದೀನೆ, ಕಲ್ಯಾಣರಾವ್ ಭೋಸ್ಲೆ, ಓಂಪ್ರಕಾಶ ಭಾವಿಕಟ್ಟಿ, ಚಂದ್ರಕಾಂತ ನಿರಾಟೆ, ಶಿವಕುಮಾರ ನೀಲಿಕಟ್ಟಿ, ರಘುನಾಥ ಗಾಯಕವಾಡ, ರಮೇಶ ಕಟ್ಟಿತುಗಾಂವ, ದಯಾನಂದ, ವಹೀದ್ ಲಖನ್, ಸಂತೋಷ ಜೋಳದಾಪಕಾ, ಬಾಬುರಾವ್ ಕೌಠಾ, ಮಹೇಶ ಗೋರನಾಳಕರ್ ಮತ್ತಿತರರು ಸಹಿ ಹಾಕಿದ್ದಾರೆ.