ಮೈಸೂರು: ಮಹಾರಾಷ್ಟ್ರದಲ್ಲಿ ವೀರ ಸಾವರ್ಕರ್ ಬಗ್ಗೆ ಅವಹೇಳನವಾಗಿ ಬರೆದು ಕೈಪಿಡಿ ವಿತರಿಸಿರುವುದನ್ನು ಖಂಡಿಸಿ ಹಾಗೂ ಪುಸ್ತಕವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ವೀರ ಸಾವರ್ಕರ್ ಯುವ ಬಳಗದ ಪದಾಧಿಕಾರಿಗಳು ಭಾನುವಾರ ಪ್ರತಿಭಟನೆ ನಡೆಸಿದರು.
ನಗರದ ಅಗ್ರಹಾರದಲ್ಲಿರುವ ಮಾಧವರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಯುವ ಬಳಗದ ಸದಸ್ಯರು, ಭಾರತದ ಸ್ವಾತಂತ್ರ್ಯಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಮತ್ತು ಅವರ ಕುಟುಂಬದ ಹೋರಾಟ ಮತ್ತು ತ್ಯಾಗ ಅತ್ಯಂತ ದೊಡ್ಡದಿದೆ. ಬ್ರಿಟಿಷರ ನಾಡನ್ನೇ ಒಳಹೊಕ್ಕಿ ಸಂಘಟನೆ ಕಟ್ಟಿ ಯುವಕರನ್ನು ಪ್ರೇರೇಪಿಸಿ ಅವರ ವಿರುದ್ಧ ಹೋರಾಟಕ್ಕಿಳಿದ ಸಾವರ್ಕರ್ ವೀರತ್ವಕ್ಕೆ ಕಾಂಗ್ರೆಸ್ಸಿನ ಸರ್ಟಿμಕೇಟ್ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವರ್ಕರ್, ವೀರತ್ವದ ಬಗ್ಗೆ ಅರಿತಿದ್ದ ಬ್ರಿಟಿಷರು, ಅವರನ್ನು ತುರ್ಕಿಸ್ತಾನದ ಮರಳುಗಾಡಿನಲ್ಲಿ ಬಂಧಿಸಿಟ್ಟಿದ್ದರು. ನಂತರ ಸಮುದ್ರದಾಚೆಯ ಅಂಡಮಾನ್ ಜೈಲಿನಲ್ಲಿಟ್ಟಿದ್ದರು. ಆದರೆ ಮಧ್ಯಪ್ರದೇಶದ ಕಾಂಗ್ರೆಸ್ ಸೇವಾದಳ ಪ್ರಕಟಿಸಿರುವ ಸಾವರ್ಕರ್ ವೀರನೇ? ಎಂಬ ಕೈಪಿಡಿಯು, ಹೊಸವರ್ಷದ ಆಚರಣೆಗಾಗಿ ಬ್ಯಾಂಕಾಕಿನ ವಿವಿಧ ಕ್ಲಬ್‌ಗಳಿಗೆ ಭೇಟಿ ನೀಡುವ ಅಭ್ಯಾಸವಿರುವ ಪಕ್ಷದ ನಾಯಕನ ಸೂಚನೆ ಮೇರೆಗೆ ತಯಾರಿಸಿದ್ದು ಎಂದು ತಿಳಿದು ಬಂದಿದೆ.
ಇಂತಹವರಿಂದಲೇ ಕೆಳಮಟ್ಟದ ಆಲೋಚನೆಗಳುಹೊರಬರಲು ಸಾಧ್ಯ ಎಂದು ಕಿಡಿಕಾರಿದರು. ಶಾಂತಿಪ್ರಿಯ ಗಾಂಧೀಜಿ ಹತ್ಯೆಯಾದ ಸಮಯದಲ್ಲಿ ಸಾವರ್ಕರ್ ಮೇಲೆ ಕಲ್ಲಿನಿಂದ ದಾಳಿ ಮಾಡಿ ಅವರ ಸಹೋದರ ನಾರಾಯಣ ಸಾವರ್ಕರ್ ಅವರನ್ನು ಕೊಂದ ಇತಿಹಾಸ ಕಾಂಗ್ರೆಸ್ ಹೊಂದಿದೆ.
ದೇಶಕ್ಕೆ ಯಾವುದೇ ಕೊಡುಗೆ ನೀಡಿರದ ರಾಹುಲ್ ಗಾಂಧಿಗೆ ಸಾವರ್ಕರ್ ಬಗ್ಗೆ ಮಾತನಾಡುವ ಯಾವುದೇ ಅರ್ಹತೆಯಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಾವರ್ಕರ್ ಬಗೆಗಿನ ಕೆಟ್ಟ ಪುಸ್ತಕವನ್ನು ನಿಷೇಧಿಸಬೇಕು ಮತ್ತು ಕಾಂಗ್ರೆಸ್ ದೇಶದ ಜನರ ಕ್ಷಮೆಯಾಚಿಸಬೇಕು. ಕಾಂಗ್ರೆಸ್ ಇದೇ ರೀತಿ ಪ್ರವೃತ್ತಿ ಮುಂದುವರಿದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಅಲ್ಲದೇ ಸಾವರ್ಕರ್ ಅವರ ಹೋರಾಟ, ತ್ಯಾಗ, ಸಮಾಜ ಸುಧಾರಣಾ ಕಾರ್ಯವನ್ನು ನೆನೆದು ಕೇಂದ್ರ ಸರ್ಕಾರ ಮುಂದೆ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದರು. ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್, ಶ್ರೀರಾಮ ಸೇನೆಯ ಸಂಜಯ್, ಪ್ರಮುಖರಾದ ವಿಕ್ರಮ್ ಅಯ್ಯಂಗಾರ್, ಸಂದೇಶ್ ಪವಾರ್, ಪ್ರಮೋದ್ ಗೌಡ, ಜೀವನ್, ಟಿ.ಎಸ್.ಅರುಣ್, ಗುರುಮೂರ್ತಿ, ಹರೀಶ್, ಉಮಾಶಂಕರ್, ಲೀಲಾ ಶೆಣೈ, ನಿಶಾಂತ್, ಲೋಹಿತ್, ರಂಗನಾಥ್, ಪರಶಿವಮೂರ್ತಿ, ಸುಚೀಂದ್ರ, ಪ್ರಶಾಂತ್ ಇತರರು ಭಾಗವಹಿಸಿದ್ದರು.