Advertisement

ಬಾಕಿ ಪಾವತಿಸದ ಕಾರ್ಖಾನೆ ವಿರುದ್ಧ ಪ್ರತಿಭಟನೆ

09:33 AM Jun 26, 2019 | Team Udayavani |

ಬೆಳಗಾವಿ: ಮುಖ್ಯಮಂತ್ರಿಗಳು ಆದೇಶ ಮಾಡಿದ್ದರೂ ಇದುವರೆಗೆ ರೈತರಿಗೆ ಹಣ ನೀಡದೇ ಸತಾಯಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸಕ್ಕರೆ ಆಯುಕ್ತರು ನಡೆಸಿದ ಸಾರ್ವಜನಿಕ ವಿಚಾರಣೆಗೆ ಆಗಮಿಸಿದ್ದ ಜಿಲ್ಲೆಯ ವಿವಿಧ ಭಾಗಗಳ ಕಬ್ಬು ಬೆಳೆಗಾರರು ಕಾರ್ಖಾನೆಗಳ ಮಾಲೀಕರ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಪೂರೈಸಿದ್ದಕ್ಕೆ ಹಣ ನೀಡದೇ ಇರುವ ಜಿಲ್ಲೆಯ ಒಂಬತ್ತು ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ನೋಟಿಸ್‌ ನೀಡಿದ್ದಾರೆ. ಇದಾದ ನಂತರ ಮುಖ್ಯಮಂತ್ರಿಗಳು ಹಣ ಪಾವತಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಆದರೆ ಕಾರ್ಖಾನೆಗಳ ಮಾಲೀಕರು ಇದಾವುದನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

ಜಿಲ್ಲೆಯ ಅಥಣಿ ಶುಗರ್ಸ್‌, ಸೌಭಾಗ್ಯಲಕ್ಷ್ಮಿ ಕಾರ್ಖಾನೆ, ವಿಶ್ವರಾಜ ಶುಗರ್ಸ್‌ ಸೇರಿದಂತೆ ಒಂಬತ್ತು ಕಾರ್ಖಾನೆಗಳಿಂದ 220 ಕೊಟಿ ರೂ.ಗಳಿಗೂ ಅಧಿಕ ಬಾಕಿ ಬರಬೇಕಿದೆ. ಈ ಸಂಬಂದ ನಾವು ಮನವಿ ಕೊಟ್ಟು ಸುಸ್ತಾಗಿದ್ದೇವೆ. ನಮ್ಮ ಕಷ್ಟ ಯಾರೂ ಕೇಳುತ್ತಿಲ್ಲ. ಕೂಡಲೇ ನಮಗೆ ಹಣ ಕೊಡಿಸಿ ಈ ಕಾರ್ಖಾನೆಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ರೈತರು ಆಗ್ರಹಿಸಿದರು.

ನಂತರ ಸಕ್ಕರೆ ಇಲಾಖೆ ಆಯುಕ್ತ ಶಾಂತಾರಾಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ವಿವಿಧ 13 ಕಾರ್ಖಾನೆಗಳು 2017-18ನೇ ಸಾಲಿನ ಕಬ್ಬಿನ ಬಾಕಿ ನೀಡಿಲ್ಲ ಎಂದು ರೈತರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದರು.

Advertisement

ಕಬ್ಬಿನ ಬಾಕಿ ಹಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಮಯ ನಿಗದಿಪಡಿಸಿ ಈ ಹಿಂದೆಯೇ ಆಯುಕ್ತರು ರೈತರಿಗೆ ನೋಟಿಸ್‌ ನೀಡಿದ್ದರು. ಅದರಂತೆ ನೂರಾರು ರೈತರು ಹಾಜರಾಗಿ ಕಾರ್ಖಾನೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ತಮಗೆ ಬರಬೇಕಾದ ಬಾಕಿ ಹಣದ ಕುರಿತು ಮಾಹಿತಿ ನೀಡಿದರು.

13 ಕಾರ್ಖಾನೆಗಳಲ್ಲಿ 12 ಕಾರ್ಖಾನೆಗಳ 2017-18ನೇ ಸಾಲಿನ ಬಾಕಿ ಬಿಲ್ ಕುರಿತು ಹಾಗೂ ಹಿರೇನಂದಿಯ ಸೌಭಾಗ್ಯ ಲಕ್ಷ್ಮಿ ಕಾರ್ಖಾನೆಯ 2013-14, 14-15 ಹಾಗೂ 15-16ನೇ ಸಾಲಿನ ಬಾಕಿ ಬಿಲ್ ಕುರಿತು ವಿಚಾರಣೆ ನಡೆಸಲಾಯಿತು. ಕಾರ್ಖಾನೆಗಳು 2013 ರಿಂದ 2019ರವರೆಗಿನ ಬಾಕಿ ನೀಡಿಲ್ಲ ಎಂದು ಕೆಲ ರೈತರು ಆರೋಪಿಸಿದರೆ 2017-18 ನೇ ಸಾಲಿನ ಬಿಲ್ ಮಾತ್ರ ಬಾಕಿ ಇದೆ ಎಂದು ಕಾರ್ಖಾನೆಗಳ ಪ್ರತಿನಿಧಿಗಳು ಹೇಳಿದರು.

ರೈತರಿಂದ ಸಮಗ್ರ ಮಾಹಿತಿ ಪಡೆದ ಆಯುಕ್ತರು ಜುಲೈನಲ್ಲಿ ಈ ಸಂಬಂಧ ಬೆಂಗಳೂರಿನಲ್ಲಿ ಮತ್ತೂಮ್ಮೆ ವಿಚಾರಣೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ರೈತ ಮುಖಂಡರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರಣ್ಣವರ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next