Advertisement

ಸಾರಿಗೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ

12:40 PM Sep 15, 2019 | Team Udayavani |

ಯಲ್ಲಾಪುರ: ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಪೊಲೀಸ್‌ ಠಾಣೆಗೆ ಧರಧರನೇ ಎಳೆದೊಯ್ದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಶನಿವಾರ ಬೆಳಗ್ಗೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬಸ್‌ ತಡೆದು ಪ್ರತಿಭಟನೆ ನಡೆಸಲಾಯಿತು.

Advertisement

11 ಗಂಟೆಯಿಂದ ಸುಮಾರು ಒಂದು ತಾಸು ಎಲ್ಲ ಬಸ್‌ಗಳನ್ನು ನಿಲ್ಲಿಸಿ, ಪ್ರತಿಭಟನೆ ನಡೆಸಿದಾಗ ಹಲ್ಲೆ ಮಾಡಿದ ಸಾರಿಗೆ ಇಲಾಖಾ ಸಿಬ್ಬಂದಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಘಟನೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರೊಬ್ಬರು ಬಸ್‌ ಹತ್ತುವಾಗ ಸಣ್ಣಪುಟ್ಟ ಮಾತುಕತೆ ವಾದಕ್ಕೀಡಾಗಿ ನಂತರ ಚಾಲಕ-ನಿರ್ವಾಹಕರು ಎಳೆದಾಡಿ, ಅವರ ಮೇಲೆ ಹಲ್ಲೆ ಮಾಡಿ, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಎದುರಿಗೆ ಪೊಲೀಸ್‌ ಠಾಣೆಗೆ ಎಳೆದುಕೊಂಡು ಹೋದ ಘಟನೆ ಖಂಡಿಸಿ ತಾಲೂಕು ಹವ್ಯಕ ಸಂಘ, ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಚಾಲಕ ಎಂ.ಎ. ಬಿರಾದಾರ್‌ ಮತ್ತು ನಿರ್ವಾಹಕ ಎಂ.ಎಚ್. ಮಾಯಣ್ಣನವರ್‌ನ್ನು ತಕ್ಷಣ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆದರೆ ಘಟಕ ವ್ಯವಸ್ಥಾಪಕ ಸಿ.ವಿ. ಇಟಗಿ, ಸೂಕ್ತ ಕ್ರಮ ಕೈಗೊಳ್ಳಲು ನಾಲ್ಕು ದಿನ ಕಾಲಾವಕಾಶ ನೀಡಬೇಕು ಎಂದು ಕೋರಿದ ನಂತರ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು.

ಘಟನೆಯ ಮಾಹಿತಿ ನೀಡದೆಯೇ ಪೊಲೀಸ್‌ ಠಾಣೆಗೆ ತಾವು ಕಾನೂನು ಮೀರಿ ದೂರುಕೊಡಲು ಹೋಗಿದ್ದು ತಪ್ಪಿದೆ. ಹಾಗಾಗಿ ಅವರು ಮಾಡಿದ ತಪ್ಪಿಗೆ ಕಾನೂನು ಪ್ರಕ್ರಿಯೆ ಕೈಗೊಂಡಿದ್ದೇವೆ. ಅವರಿಬ್ಬರ ಮೇಲೆ ಬೆಳಗ್ಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದೇನೆ. ಇದಕ್ಕೂ ಹೆಚ್ಚಿನದು ನನ್ನ ವ್ಯಾಪ್ತಿಯಲ್ಲಿಲ್ಲ ಎಂದರು.

Advertisement

ಪೊಲೀಸ್‌ ಸ್ಟೇಶನ್‌ನಲ್ಲಿ ಅಡಗಿ ಕುಳಿತ ಇಬ್ಬರನ್ನು ಇಲ್ಲಿಗೆ ತಂದು ಬಹಿರಂಗ ಕ್ಷಮೆ ಕೇಳುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಂತರ ಪೊಲೀಸರು ಅವರಿಬ್ಬರನ್ನು ಪ್ರತಿಭಟನಾ ಸ್ಥಳಕ್ಕೆ ಕರೆತಂದು ಕ್ಷಮೆಯಾಚಿಸಿದರು.

ರೈತ ಮುಖಂಡ ಪಿ.ಜಿ. ಭಟ್ಟ ಬರಗದ್ದೆ ಮಾತನಾಡಿ, ಇಂತಹ ದೌರ್ಜನ್ಯ ಸಹಿಸಲಿಕ್ಕಾಗದು. ಇಂದು ನಾವು ಎಚ್ಚರಿಕೆ ನೀಡಿದ್ದೇವೆ. ಶಾಲಾ ಮಕ್ಕಳಿಗೆ ಅನೇಕ ಚಾಲಕ, ನಿರ್ವಾಹಕರು ಶೋಷಿಸುತ್ತಿರುವುದು ಕಂಡುಬಂದಿದೆ. ಇನ್ನುಮುಂದೆ ಯಾವುದೇ ದೂರು ಬಂದರೆ ನಾವು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಎಂ.ಆರ್‌. ಹೆಗಡೆ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ, ತಾಲೂಕು ಹವ್ಯಕ ನೌಕರರ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಹವ್ಯಕ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಎನ್‌. ಗಾಂವ್ಕರ, ವಿವಿಧ ಸಂಘಟನೆಗಳ ಪ್ರಮುಖರಾದ ಡಾ| ರವಿ ಭಟ್ಟ, ದ್ಯಾಮಣ್ಣ ಬೋವಿವಡ್ಡರ್‌, ಸುಬ್ರಹ್ಮಣ್ಯ ಭಾಗಿನಕಟ್ಟಾ, ಸಂಜೀವಕುಮಾರ ಹೊಸ್ಕೇರಿ, ಪ್ರಶಾಂತ ಸಭಾಹಿತ, ಪ್ರಭಾಕರ ಭಟ್ ವಡ್ರಮನೆ, ಆರ್‌.ಜಿ. ಭಟ್ ಮೆಗಿನಮನೆ, ಗಣಪತಿ ಕರುಮನೆ, ದತ್ತಾತ್ರಯ ಬೋಳಗುಡ್ಡೆ, ಗೋಪಾಲಕೃಷ್ಣ ಕಿಚ್ಚುಪಾಲ್, ಸಣ್ಣಪ್ಪ ಭಾಗ್ವತ್‌ ಮುಂತಾದವರು ಭಾಗವಹಿಸಿದ್ದರು.

ಕೆಎಸ್‌ಆರ್‌ಟಿಸಿಯವರಿಂದಲೂ ಪ್ರತಿಭಟನೆ: ಸಾರ್ವಜನಿಕರ ಪ್ರತಿಭಟನೆ ಖಂಡಿಸಿ ಸಾರಿಗೆ ಸಂಸ್ಥೆ ನೌಕರರೂ ದಿಢೀರ್‌ ಪ್ರತಿಭಟನೆ ನಡೆಸಿದರು. ಬಸ್‌ ನಿಲ್ದಾಣದಲ್ಲಿ ನೂರಾರು ಜನರು ಜಮಾಯಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಸಂಸ್ಥೆಯ ನೌಕರರನ್ನು ನಿಂದಿಸಿದ್ದಾರೆ ಎಂದು ಘಟಕ ವ್ಯವಸ್ಥಾಪಕರ ನೇತೃತ್ವದಲ್ಲಿ ಸಿಪಿಐ ಡಾ| ಮಂಜುನಾಥ ನಾಯಕಗೆ ಮನವಿ ಸಲ್ಲಿಸಿದರು. ಘಟಕದ ನೌಕರರು ಘಟಕದಿಂದ ಬಿಡುವ 15ಕ್ಕೂ ಹೆಚ್ಚು ಬಸ್‌ಗಳನ್ನು ಬಿಡದೇ 3 ತಾಸಿಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದರು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ತುಪ್ಪ ಸುರಿದ ಸಾರಿಗೆ ಸಿಬ್ಬಂದಿ: ಸಾರ್ವಜನಿಕರು ಪ್ರತಿಭಟನೆ ನಡೆಸಿ ಸಂಧಾನ ಮುಗಿಸಿ ಒಂದು ಹಂತದಲ್ಲಿ 12 ಗಂಟೆಗೆ ವಾಪಸ್ಸಾಗಿದ್ದರು. ಆದರೆ ಆ ಹೊತ್ತಿಗೆ ಸಾರಿಗೆ ಸಿಬ್ಬಂದಿ ತಾವು ಪ್ರತಿಭಟನೆ ಮಾಡಲು ಮುಂದಾಗಿ ದೂರು ನೀಡಿದ್ದಲ್ಲದೇ ಪೊಲೀಸರಿಗೆ ನೀಡಿದ ದೂರಿನಲ್ಲಿ ಬಸ್ಸಿಗೆ ಬೆಂಕಿ ಹಚ್ಚುವುದಾಗಿಯೂ ಮತ್ತು ಚಾಲಕ ನಿರ್ವಾಹಕರನ್ನು ದಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆಂದು ತಿಳಿಸಿದ್ದಾರೆ. ಆದರೆ ಸ್ಥಳದಲ್ಲಿ ಇಂತಹ ಯಾವುದೇ ಅಹಿತಕರ ಮಾತುಗಳು ಬಂದಿರಲಿಲ್ಲವಾದರೂ ದೂರಿನಲ್ಲಿ ನೀಡಿದ ಬಳಿಕ ಈಗ ಮತ್ತೆ ಆಕ್ರೋಶ ವ್ಯಕ್ತವಾಗಿದೆ. ಎಲ್ಲವನ್ನು ಸರಿಪಡಿಸುವ ಭರವಸೆ ನೀಡಿದ ಘಟಕ ವ್ಯವಸ್ಥಾಪಕರೇ ತೆರೆಯಲ್ಲಿ ಸಿಬ್ಬಂದಿಗಳನ್ನು ಎತ್ತಿಕಟ್ಟಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದು ಮತ್ತೆ ಸಾರ್ವಜನಿಕರು ಘಟಕ ವ್ಯವಸ್ಥಾಪಕರ ವಿರುದ್ಧವೇ ಪ್ರತಿಭಟನೆಗಿಳಿಯುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next