ಬಳ್ಳಾರಿ: ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ರಚಿಸುವ ಸಲುವಾಗಿ ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿ ಕಾರಿಗಳು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಕೀಲರ ಸಂಘ, ರೈತರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು. ಬಳ್ಳಾರಿ ಜಿಲ್ಲೆಯನ್ನುಯಾವುದೇ ಕಾರಣಕ್ಕೂ ವಿಭಜಿಸಬಾರದು ಎಂದು ಒತ್ತಾಯಿಸಿದರು.
ಯಾವುದೇ ಕಾರಣಕ್ಕೂ ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಬಾರದು. ಬಳ್ಳಾರಿ ಜಿಲ್ಲೆಯನ್ನು ಅಖಂಡ ಜಿಲ್ಲೆಯಾಗಿ ಉಳಿಸಬೇಕು. ಅನರ್ಹ ಶಾಸಕ ಆನಂದಸಿಂಗ್ ಅವರ ಅನುಕೂಲಕ್ಕಾಗಿ ಜಿಲ್ಲೆಯನ್ನು ವಿಭಜಿಸುವುದಲ್ಲದೇ, ಇಡೀ ಜಿಲ್ಲೆಯ ಜನತೆಯ ಆಶೋತ್ತರಗಳಿಗೆ ಬೆಲೆ ಕೊಡುವುದನ್ನು ಮುಖ್ಯಮಂತ್ರಿಗಳು ಮರೆಯಬಾರದು. ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಮಾಜಿ ಸದಸ್ಯ ಅಲ್ಲಂ ವೀರಭದ್ರಪ್ಪ ಜಿಲ್ಲೆ ವಿಭಜನೆಗೆ ಬೆಂಬಲ ಘೋಷಿಸಿರುವುದು ದುರದೃಷ್ಟಕರ ಸಂಗತಿಯಾಗಿದೆ. ಇವರು ಬಳ್ಳಾರಿ ಜಿಲ್ಲೆಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ ಜಿಲ್ಲೆಯನ್ನು ಸ್ವತಂತ್ರ ಪೂರ್ವದಲ್ಲೆ ಇಬ್ಭಾಗ ಮಾಡಿದ್ದರಿಂದ ಇಂದಿಗೂ ತೊಂದರೆ ಅನುಭವಿಸುತ್ತಿದ್ದೇವೆ. ಇದೀಗ ಮತ್ತೆ ವಿಭಜಿಸಿ ಬಳ್ಳಾರಿ ಜನತೆಗೆ ಅನ್ಯಾಯ ಮಾಡಬಾರದು. ಇಬ್ಭಾಗ ಮಾಡುವುದರಿಂದ ಬಳ್ಳಾರಿಯ ಐತಿಹಾಸಿಕ ಹಿನ್ನೆಲೆಗೆ ತೊಂದರೆಯಾಗಲಿದೆ. ಈಗಾಗಲೇ ಜಿಪಂ ಉಪವಿಭಾಗ, ಲೋಕಪಯೋಗಿ, ಭೂ ಸೇನಾ ನಿಗಮ ಕಚೇರಿಗಳು ಹೂವಿನಹಡಗಲಿಯಲ್ಲಿವೆ.
ಉಪ ವಿಭಾಗಾಧಿಕಾರಿಗಳ ಕಚೇರಿ, ಗಣಿ ಮತ್ತು ಭೂ ವಿಜ್ಞಾನ, ಪ್ರವಾಸೋದ್ಯಮ, ಹಂಪಿ ವಿಶ್ವ ಪಾರಂಪರಿಕ ಪ್ರಾದೇಶಿಕ ಪ್ರಾಧಿಕಾರ ಕಚೇರಿ, ಕೇಂದ್ರ ಪುರಾತತ್ವ ಸಂಯೋಜನಾ ಇಲಾಖೆ, ರಾಜ್ಯ ಹೆದ್ದಾರಿಗಳ ಕಚೇರಿಗಳು ಸೇರಿ ಪ್ರಮುಖ ಕಚೇರಿಗಳು ಹೊಸಪೇಟೆಯಲ್ಲಿವೆ. ಕೇವಲ ಡಿಸಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿಗಳ ಕಚೇರಿ ಮತ್ತು ಕೃಷಿ ಹಾಗೂ ಕೈಗಾರಿಕೆ ಇಲಾಖೆ ಕಚೇರಿಗಳು ಬಳ್ಳಾರಿಯಲ್ಲಿವೆ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವುದರಿಂದ ಹೊಸಪೇಟೆಯಲ್ಲಿನ ತುಂಗಭದ್ರಾ ಜಲಾಶಯದಿಂದ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ. ಜನರ ನಡುವೆ ಹೊಂದಾಣಿಕೆ ತಪ್ಪಿ ಗಲಾಟೆ, ಗದ್ದಲಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಹಾಗಾಗಿ ಬಳ್ಳಾರಿ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜಿಸಬಾರದು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕಸಾಪ ಜಿಲ್ಲಾಧ್ಯಾಕ್ಷ ಸಿದ್ದರಾಮ ಕಲ್ಮಠ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ವಕೀಲರ ಸಂಘದ ಅಧ್ಯಕ್ಷ ಅಂಕಲಯ್ಯಸ್ವಾಮಿ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಟಿ.ಎಚ್.ಎಂ.ಬಸವರಾಜ, ಮುಖಂಡರಾದ ಟಪಾಲ್ ಗಣೇಶ, ಚಾನಾಳ್ ಶೇಖರ್, ಶ್ರೀನಿವಾಸ, ಮೇಕಲ ಈಶ್ವರರಡ್ಡಿ, ಮೋಹನಬಾಬು, ಮಧುಸೂಧನ, ಶಬ್ಬೀರ್ ಶೇಖ್, ವೀರೇಶ ಮತ್ತಿತರರಿದ್ದರು.