ಮಾಗಡಿ: ಹಾಲು ಉತ್ಪಾದಕರ ಸಂಘದಲ್ಲಿ ಮತದಾನದ ಹಕ್ಕು ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಉಡುವೆಗೆರೆ ಗ್ರಾಮದ ಹಾಲು ಉತ್ಪಾದಕರು ಎಂಪಿಸಿಎಸ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಉಡುವೆಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಚುನಾವಣಾಧಿಕಾರಿ ಬಂದಿದ್ದು 12.30ಕ್ಕೆ. ಅಲ್ಲದೆ ಸಂಘದಲ್ಲಿ 140 ಸದಸ್ಯರಿದ್ದರೂ ಸಹ ಕೇವಲ 10 ಸದಸ್ಯರಿಗೆ ಮತದಾನದ ಹಕ್ಕು ನೀಡಲಾಗಿದೆ ಎಂದು ಆರೋಪಿಸಿ ಸದಸ್ಯರು ಸಂಘದ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಉಡುವೆಗೆರೆ ಎಂಪಿಸಿಎಸ್‌ನಲ್ಲಿ ಒಟ್ಟು 152 ಸದಸ್ಯರಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 54 ಮಂದಿ ಸಂಘಕ್ಕೆ 180 ದಿನದಲ್ಲಿ 500 ಲೀಟರ್ ಹಾಲು ಪೂರೈಕೆ ಮಾಡಿಲ್ಲ. ಎಂಪಿಸಿಎಸ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಹಾಗೂ ಮತದಾನದ ಹಕ್ಕು ಪಡೆಯಲು 180 ದಿನಗಳಿಗೆ 500 ಲೀಟರ್ ಹಾಲು ಪೂರೈಕೆ ಮಾಡಿರಬೇಕು. 3 ಸಾಮಾನ್ಯ ಸಭೆಗಳಿಗೆ ಕಡ್ಡಾಯವಾಗಿ ಹಾಜರಿದ್ದವರಿಗೆ ಮಾತ್ರ ಮತದಾನದ ಹಕ್ಕು ನೀಡಬೇಕು ನಿಯಮಕ್ಕೆ ತಿದ್ದುಪಡಿ ಮಾಡಲಾದ ಹಿನ್ನಲೆಯಲ್ಲಿ ಕೇವಲ 10 ಮಂದಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ. ಸುಮಾರು 40ಕ್ಕೂ ಹೆಚ್ಚು ಹಾಲು ಉತ್ಪಾದಕರು ಮತದಾನದ ಹಕ್ಕನ್ನು ಕಳೆದು ಕೊಂಡಿರುವುದು ಹಾಲು ಉತ್ಪಾದಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾಡಬಾಳ್ ತಾಪಂ ಸದಸ್ಯ ವೆಂಕಟೇಶ್ ಮಾತನಾಡಿ, ಎಂಪಿಸಿಎಸ್ ಬೈಲಾಗೆ ತಿದ್ದುಪಡಿಯಾಗಿರುವ ವಿಷಯವನ್ನು ಸಂಘದ ಕಾರ್ಯದರ್ಶಿ ಹಾಲು ಉತ್ಪಾದಕರ ಗಮನಕ್ಕೆ ತಂದಿಲ್ಲ. ಅಲ್ಲದೇ ಕಾರ್ಯದರ್ಶಿ ಸಂಘದಲ್ಲಿ ಹಾಲನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಈ ಬಗ್ಗೆ ಗ್ರಾಮದಲ್ಲಿ ಪಂಚಾಯ್ತಿ ನಡೆದಿತ್ತು. ಆ ಸಮಯದಲ್ಲಿ ಕಾರ್ಯದರ್ಶಿ ಗ್ರಾಮದ ಮುಖಂಡರ ಬಳಿ ಕ್ಷಮೆಯಾಚಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ನೂತನ ನಿರ್ದೇಶಕರು ಬಂದರೆ ತಮ್ಮ ಆಕ್ರಮಗಳು ಬೆಳಕಿಗೆ ಬರುತ್ತದೆ ಎನ್ನುವ ಉದ್ದೇಶದಿಂದ ಬೈಲಾಗೆ ತಿದ್ದುಪಡಿಯಾಗಿರುವ ವಿಷಯವನ್ನು ಮುಚ್ಚಿಟ್ಟಿರುವ ಕಾರ್ಯದರ್ಶಿ ತಮಗೆ ಬೇಕಾದವರಿಗೆ ಮಾತ್ರ ಮತದಾನದ ಹಕ್ಕು ಸಿಗುವಂತೆ ಮಾಡಿದ್ದಾರೆ. ಸಂಘದಲ್ಲಿ 13 ನಿರ್ದೇಶಕ ಸ್ಥಾನಗಳಿದ್ದರೂ ಸಹ ಕೇವಲ 10 ಮಂದಿ ಮತದಾನದ ಆರ್ಹತೆ ಪಡೆದಿದ್ದಾರೆ. ಇದರಿಂದ ನ್ಯಾಯ ಸಮ್ಮತ ಚುನಾವಣೆಯ ನಡೆಯಲು ಸಾಧ್ಯವಾಗದ ಕಾರಣ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ವೆಂಕಟೇಶ್ ಆಗ್ರಹಿಸಿ ದರು. ಮಧ್ಯಾಹ್ನ 2 ಗಂಟೆಯವರೆಗೂ ಪ್ರತಿಭಟನಕಾರರು ಎಂಪಿಸಿಎಸ್ ಕಚೇರಿ ಮುಂಭಾಗದಲ್ಲಿ ಪ್ರತಿ ಭಟನೆ ನಡೆಸಿದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಚುನಾವಣಾಧಿಕಾರಿಗೆ ಕಚೇರಿಯೊಳಗೆ ತೆರಳಲು ಅವಕಾಶ ಮಾಡಿಕೊಟ್ಟರು. ಕೆಲವು ಸದಸ್ಯರು ನಿರ್ದೇಶಕ ಸ್ಥಾನಕ್ಕೆ ನಾಮಪತ್ರವನ್ನು ಸಲ್ಲಿಸಿದರು.
ರಾಜೇಶ್, ಮರಿದೇವರು, ಶಿವಲಿಂಗಯ್ಯ, ಬಸವರಾಜ್, ಮಹದೇವಯ್ಯ, ನಾಗರಾಜ್, ಸಿದ್ದರಾಜು, ಮಂಜುನಾಥ್, ಗಿರೀಶ್ ಕುಮಾರ್, ರಾಮಣ್ಣ, ಶಿವಣ್ಣ, ಪರಮೇಶ್, ಚನ್ನಬಸವಣ್ಣ, ಸಿದ್ದಲಿಂಗಣ್ಣ ಬಸವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.