Advertisement

ಇಂಜಿನಿಯರಿಂಗ್‌ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ

05:39 PM Dec 29, 2021 | Team Udayavani |

ಬಾಗಲಕೋಟೆ: ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಶುಲ್ಕ ಹೆಚ್ಚಳ ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಎಬಿವಿಪಿ ಕರ್ನಾಟಕ ರಾಜ್ಯ ಹಾಸ್ಟೆಲ್‌ ಪ್ರಮುಖ ಪ್ರಕಾಶ ಪೂಜಾರ ಮಾತನಾಡಿ, ಕೋವಿಡ್‌ ಹಿನ್ನೆಲೆಯಲ್ಲಿ ಖಾಸಗಿ ಕಾಲೇಜುಗಳ ಇಂಜಿನಿಯರಿಂಗ್‌ ಕೋರ್ಸ್‌ನ ಶುಲ್ಕದಲ್ಲಿ ಯಾವುದೇ ಹೆಚ್ಚಳ ಮಾಡದೆ ಹಿಂದಿನ ವರ್ಷದ ಶುಲ್ಕವನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ ಎನ್‌.ಅಶ್ವತ್‌ ನಾರಾಯಣ್‌ ಅವರು ಈಚೆಗೆ ಹೇಳಿಕೆ ಕೊಟ್ಟಿದ್ದರು. ಆದರೆ, ಈಗ ಸರಕಾರ ಕೆಲವು ಪರೋಕ್ಷ ಕ್ರಮಗಳ ಮೂಲಕ ಶುಲ್ಕ ಹೆಚ್ಚಳಕ್ಕೆ ದಾರಿ ಮಾಡಿಕೊಡುವ ಆದೇಶವನ್ನು ಹೊರಡಿಸಿದೆ.

ಇದರಿಂದಾಗಿ ಇಂಜಿನಿಯರಿಂಗ್‌ ಓದುವ ಕನಸು ಕಂಡಿರುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕನಸು ಕನಸಾಗಿಯೇ ಉಳಿಯುವಂತಾಗಿದೆ ಎಂದರು. ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ಇಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಿಂದ 83,526 ರೂ. ಹಾಗೂ 90,060 ರೂ.ಗಳಿಗೆ ನಿಗದಿಪಡಿಸಲಾಗಿದೆ.

ಹಿಂದಿನ ವರ್ಷ ಈ ಶುಲ್ಕವೂ 58,806 ರೂ. ಹಾಗೂ 65,340 ರೂ. (ವಿಶ್ವವಿದ್ಯಾಲಯ ಶುಲ್ಕವನ್ನು ಒಳಗೊಂಡಂತೆ) ನಿಗದಿಪಡಿಸಲಾಗಿತ್ತು. ಆದರೆ ಸರಕಾರವು 2021-2022 ನೇ ಸಾಲಿನಿಂದ 20,000 ರೂಗಳ ಕಾಲೇಜುಗಳ ಇತರ ಶುಲ್ಕ ಹಾಗೂ ಸ್ಕಿಲ್‌ ಲ್ಯಾಬ್‌ ಸೌಲಭ್ಯಕ್ಕಾಗಿ 10,000 ರೂ.ಗಳಿಂದ 20,000 ರೂ.ವರೆಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸರಕಾರ ಕಾಲೇಜುಗಳಿಗೆ ಅವಕಾಶ ನೀಡಿದೆ. ಇದರಿಂದಾಗಿ 40 ಸಾವಿರ ರೂಪಾಯಿವರೆಗೆ ಹೆಚ್ಚುವರಿಯಾಗಿ
ವಿದ್ಯಾರ್ಥಿ ನೀಡಬೇಕಾಗಿದೆ ಎಂದು ಹೇಳಿದರು.

ಬಡ-ಪ್ರತಿಭಾವಂತ ವಿದ್ಯಾರ್ಥಿಗಳ ಮತ್ತು ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪಾಲಕರ, ಪೋಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿಸಿರುವ ಆದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಸಹ ಸಂಚಾಲಕ ಉನ್ನತ ಬೇವಿನಕಟ್ಟಿ, ನಗರ ಕಾರ್ಯದರ್ಶಿ ಜ್ಯೋತಿ ಸಜ್ಜನ, ತಾಲೂಕು ಸಂಚಾಲಕ ಪ್ರಶಾಂತ ಮುರನಾಳ, ನಗರ ಸಹ ಕಾರ್ಯದರ್ಶಿ ಶ್ರೇಯಸ್‌ ಶೆಟ್ಟಿ ಹಾಗೂ ನಿಖಿಲ ಹೆಬ್ಟಾಳ, ಕಾರ್ಯಕರ್ತರಾದ ಪನಿ ರಾಘವೇಂದ್ರ, ಓಂಕಾರ,  ಧೀರಜ್‌, ಚನ್ನಪ್ಪ, ಅಭಿಷೇಕ, ಸ್ವಸ್ತಿಕ, ಹರ್ಷ, ಲಕ್ಷ್ಮಣ, ಹಯವದನ, ಸುಹಾಸ, ಕೃಷ್ಣ, ಭುವನ, ನವೀನ, ಭವಾನಿ, ಐಶ್ವರ್ಯ, ಪಲ್ಲವಿ, ಖುಷಿ, ಅಕ್ಷತಾ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next