ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಬೆಳೆಹಾನಿ ಹಿನ್ನೆಲೆಯಲ್ಲಿ ಪರಿಹಾರಕ್ಕಾಗಿ ಒತ್ತಾಯಿಸಿ ಆ ಭಾಗದ ಬಿಜೆಪಿ ಶಾಸಕರು ಬುಧವಾರ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಂದಿದೆ. ಒಂದೇ ದಿನದಲ್ಲಿ 14-15 ಇಂಚು ಮಳೆಯಾಗಿದೆ. ಹೀಗಾಗಿ ಎಲ್ಲ ಜಲಾಶಯಗಳು ತುಂಬಿವೆ. ಮಳೆಯಿಂದ ಸಾಕಷ್ಟು ಬೆಳೆಹಾನಿಯಾಗಿದೆ. ಹೀಗಾಗಿ, ಈ ಪ್ರದೇಶವನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಹಾನಿಗೊಳಗಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕು. ರಸ್ತೆಗಳು ಹಾಗೂ ಮನೆಗಳು ಹಾನಿಯಾಗಿದ್ದು ಪರಿಹಾರ ಒದಗಿಸಬೇಕು. ರಸ್ತೆಗಳಲ್ಲಿ ಸಾವಿಗೂ ಹೋಗೋದಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಜಿಲ್ಲಾ ಹಾಗೂ ತಾಲೂಕು ಪಂಚಾಯತ್‌ಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ನಮ್ಮ ಭಾಗದಲ್ಲಿ ಅತಿವೃಷ್ಟಿಯಾಗಿದೆ. ಕಾಫಿ ಬೆಳೆ ಹಾನಿಯಾಗಿದೆ. ದರೆ, ಸರ್ಕಾರ ತಕ್ಷಣ ನೆರವಿಗೆ ಧಾವಿಸಿಲ್ಲ ಎಂದು ಆರೋಪಿಸಿದರು.
ಕೊಡಗು ಜಿಲ್ಲೆಗೆ ನೀಡಿದಂತೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 500 ಕೋಟಿ ರೂ. ಮನೆ ಹಾನಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರವಾಗಿ ಆಗಮಿಸಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಮುಖ್ಯಮಂತ್ರಿಯವರ ಬಳಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಧರಣಿ ವಾಪಸ್ ಪಡೆಯಲಾಯಿತು.