Advertisement

ಜಾಗ ಅತಿಕ್ರಮಣ ಖಂಡಿಸಿ ಪ್ರತಿಭಟನೆ

11:43 AM Nov 26, 2019 | Team Udayavani |

ಹರಪನಹಳ್ಳಿ: ತಾಲೂಕಿನ ಕನಕನಬಸಾಪುರ ಗ್ರಾಮದಲ್ಲಿ ಶ್ರೀಉಡಸಲಾಂಬಿಕ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದು ಅದಕ್ಕೆ ಪಂಚಾಯ್ತಿಯಲ್ಲಿ ಇ-ಸ್ವತ್ತಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿ ಸಿ ಗ್ರಾಮಸ್ಥರು ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಾಪಂ ಇಒ ಅವರಿಗೆ ಮನವಿ ಸಲ್ಲಿಸಿದರು.

Advertisement

ನಿಚ್ಚವ್ವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಕನಕನಬಸಾಪುರ ಗ್ರಾಮದಲ್ಲಿ ಶ್ರೀ ಉಡಸಲಾಂಬಿಕ ದೇವಸ್ಥಾನಕ್ಕೆ ಸೇರಿದ ಜಾಗ ಹಾಗೂ ರಸ್ತೆ ಜಾಗವನ್ನು ಕೆ. ಹಾಲಮ್ಮ ಗಂಡ ಕೆ. ವೀರಪ್ಪ ಎಂಬುವವರು ಆಶ್ರಯ ಯೋಜನೆಯ ಮನೆ ನಿರ್ಮಿಸಲು ಅಕ್ರಮಿಸಿಕೊಂಡು ಇ ಸ್ವತ್ತಿನಲ್ಲಿ ಸೇರ್ಪಡೆ ಮಾಡಿಕೊಂಡಿರುತ್ತಾರೆ. ಆದರೆ ಸದರಿ ಜಾಗ ಸಾರ್ವಜನಿಕರ ಆಸ್ತಿಯಾಗಿದ್ದು, 2012-13ನೇ ಸಾಲಿನಲ್ಲಿ ತಕರಾರು ನೀಡಿದಾಗ ಅಂದಿನ ಗ್ರಾಪಂ ಅಧ್ಯಕ್ಷರು, ಪಿಡಿಒ ಸಮ್ಮುಖದಲ್ಲಿ ಸಭೆ ನಡೆದು ಸಾರ್ವಜನಿಕ ರಸ್ತೆಯ 10 ಅಡಿ ಜಾಗವನ್ನು ಹೊರತುಪಡಿಸಿ ಮನೆ ಕಟ್ಟಿಕೊಳ್ಳುವಂತೆ ತೀರ್ಮಾನಿಸಲಾಗಿತ್ತು. ಗ್ರಾಮ ಸಭೆಯಲ್ಲಿ ಈ ಕುರಿತು ಠರಾವು ಮಾಡಲಾಗಿತ್ತು. ಠರಾವು ಉಲ್ಲಂಘಿಸಿ ಸದರಿ ಜಾಗದಲ್ಲಿ ಮನೆ ನಿರ್ಮಿಸುತ್ತಿದ್ದಾರೆ ಎಂದು ದೂರಿದರು.

ಸದರಿ ರಸ್ತೆಯಲ್ಲಿ ಗ್ರಾಮದ ರೈತಾಪಿ ಜನರು ಎತ್ತಿನ ಬಂಡಿಗಳು, ಟ್ರ್ಯಾಕ್ಟರ್‌, ಬೇಸಾಯ ಪರಿಕರಗಳು ತೆಗೆದುಕೊಂಡು ಹೋಗಲು ಅನುಕೂಲವಾಗಿದೆ. ಆದರೆ ಇದೀಗ ಈ ಜಾಗದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ತುಂಬಾ ಅನಾಕೂಲವಾಗುತ್ತಿದೆ. ಗ್ರಾಪಂ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಮತ್ತು ಸುತ್ತಲಿನ ಜನರ ಅಭಿಪ್ರಾಯ ಹಾಗೂ ಸಹಿ ಪಡೆಯದೇ ಹಾಲಮ್ಮ ಹೆಸರಿಗೆ ಇ-ಸ್ವತ್ತಿಗೆ ಸೇರ್ಪಡೆ ಮಾಡಿದ್ದಾರೆ. ಕಾನೂನುಬಾಹಿರವಾಗಿ ಸೇರ್ಪಡೆ ಮಾಡಿರುವ ಇ-ಸ್ವತ್ತನ್ನು ಕೂಡಲೇ ರದ್ದುಪಡಿಸಬೇಕು. ಕೂಡಲೇ ತಾವು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಇಒ ಅವರಿಗೆ ಒತ್ತಾಯಿಸಿದರು. ನ. 29ರಂದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತೇನೆ.  ತಕ್ಷಣವೇ ಇ-ಸ್ವತ್ತು ರದ್ದುಪಡಿಸುವಂತೆ ಪಿಡಿಒ ಅವರಿಗೆ ಸೂಚನೆ ನೀಡಲಾಗುವುದು.

ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಇಒ ಪಿ.ಎಸ್‌.ಅನಂತರಾಜು ಅವರು ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಚಿಗಟೇರಿ ಬಸವನಗೌಡ, ಕಂಚಿಕೇರಿ ಈರಣ್ಣ, ಸ್ವಾಸ್ವಿಹಳ್ಳಿ ಪ್ರಕಾಶ್‌, ಮೈದೂರು ರಾಮಪ್ಪ, ಹುಲಿಕಟ್ಟಿ ಚಂದ್ರಪ್ಪ, ಮುಖಂಡರಾದ ನೀಲಗುಂದ ವಾಗೀಶ್‌, ಕನಕನಬಸಾಪುರ ಮಂಜುನಾಥ, ಉದಯಶಂಕರ್‌, ನಿಚ್ಚವ್ವನಹಳ್ಳಿ ಆನಂದ್‌, ನೀಲಗುಂದ ಮಂಜುನಾಥ್‌, ಜೀಷಾನ್‌, ಹರಿಯಮ್ಮನಹಳ್ಳಿ ಮಹಾಂತೇಶ್‌, ಕೆ.ವಿರುಪಾಕ್ಷಪ್ಪ, ಅಂಜಿನಪ್ಪ, ದುರುಗಪ್ಪ, ರಾಜಪ್ಪ, ಮಂಜುನಾಥ್‌, ಶ್ರೀಕಾಂತ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next