Advertisement

ದೇವಸ್ಥಾನ ತೆರವು ಖಂಡಿಸಿ ಪ್ರತಿಭಟನೆ

10:37 AM Nov 26, 2019 | Team Udayavani |

ಕಲಬುರಗಿ: ನಗರದ ಹೊರವಲಯದ ಕಲಬುರಗಿ ವಿಮಾನ ನಿಲ್ದಾಣದ ಆವರಣದಲ್ಲಿ ಸಂತ ಸೇವಾಲಾಲ ಮಹಾರಾಜ ಮತ್ತು ಮರಿಯಮ್ಮ ದೇವಿ ದೇವಸ್ಥಾನಗಳ ತೆರವು ಖಂಡಿಸಿ ಬಂಜಾರಾ ಸಮುದಾಯದವರು ನಗರದಲ್ಲಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿದರು.

Advertisement

ಪ್ರತಿಭಟನೆಕಾರರು ಜಿಲ್ಲಾ ಧಿಕಾರಿ ಬಿ. ಶರತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ದೇವಸ್ಥಾನ ಧ್ವಂಸ ಮಾಡಿರುವುದು ಬಂಜಾರಾ ಧರ್ಮಕ್ಕೆ ಮಾಡಿದ ಘೋರ ಅಪಮಾನವಾಗಿದೆ ಎಂದು ಆರೋಪಿಸಿದರು.

ವಿಮಾನ ನಿಲ್ದಾಣಕ್ಕಾಗಿ ಬಂಜಾರಾ ಸಮುದಾಯದವರು ಜಮೀನು ನೀಡಿದರೂ ಸಹ ಅವರಿಗೂ ಸರ್ಕಾರ ವಂಚಿಸಿದೆ. ರಾಜ್ಯ ಸರ್ಕಾರ ರೈತರಿಗೆ ನೀಡಿದ ಮಾತಿನಿಂದ ಹಿಂದೆ ಸರಿದು ಬೇಜವಾಬ್ದಾರಿಯಿಂದ ಕ್ರಮ ಕೈಗೊಳ್ಳುತ್ತಿದೆ ಎಂದರು. ದೇವಸ್ಥಾನಗಳನ್ನು ಧ್ವಂಸಗೊಳಿಸಿದವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದ ಅವರು, ವಿಮಾನ ನಿಲ್ದಾಣಕ್ಕೆ ಶೇಕಡಾ 90ರಷ್ಟು ಭೂಮಿ ನೀಡಿದ ಮದಿಹಾಳ ತಾಂಡಾ ಮತ್ತು ಮೋಕಿನತಾಂಡಾ ರೈತರ ಆಶಯದಂತೆ ವಿಮಾನ ನಿಲ್ದಾಣಕ್ಕೆ ಸಂತ್‌ ಸೇವಾಲಾಲರ ಹೆಸರು ಇಡುವಂತೆ, ಸ್ಥಳಾಂತರಗೊಂಡ ಪುನರ್‌ ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿರುವ ರೈತರಿಗೆ ಮೂಲ ಸೌಕರ್ಯಗಳನ್ನು ಸಂಪೂರ್ಣವಾಗಿ ಕಲ್ಪಿಸುವಂತೆ ಆಗ್ರಹಿಸಿದರು.

ವಿಮಾನ ನಿಲ್ದಾಣಕ್ಕಾಗಿ ಜಮೀನು ಕೊಟ್ಟವರ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಒದಗಿಸಬೇಕು. ಜಮೀನು ಕಳೆದುಕೊಂಡವರಿಗೆ ಮೂರು ಹಂತಗಳಲ್ಲಿ ಪರಿಹಾರ ನೀಡಿದ್ದು,ಅದರಲ್ಲಿ ಅನ್ಯಾಯವಾಗಿದೆ. ಕೆಲವರಿಗೆ ಕಡಿಮೆ, ಇನ್ನೂ ಕೆಲವರಿಗೆ ಹೆಚ್ಚು ಪರಿಹಾರ ದೊರಕಿದ್ದು, ಆ ತಾರತಮ್ಯ ನೀತಿಯನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆ ಪರ್ವತಲಿಂಗ ಪರಮೇಶ್ವರ ಮಹಾರಾಜರು, ಸಿದ್ದಲಿಂಗ ಸ್ವಾಮೀಜಿ, ಬಳಿರಾಮ ಮಹಾರಾಜರು, ಮಾತಾಶ್ರೀ ಲತಾದೇವಿ, ಮೂರಾಹರಿ ಮಹಾರಾಜರು, ವಿಠಲ ಮಹಾರಾಜರು, ಅನಿಲ ಸಾಹೇಬ ಮಹಾರಾಜರು, ಲೋಕೇಶ ಮಹಾರಾಜರು,ಶಾಸಕ ಅವಿನಾಶ ಜಾಧವ,ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ ರಾಠೊಡ, ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ವಿಠಲ್‌ ಜಾಧವ್‌, ಜಿಪಂ ಸದಸ್ಯ ಅರವಿಂದ ಚವ್ಹಾಣ, ಜಿಪಂ ಮಾಜಿ ಸದಸ್ಯ ಪ್ರೇಮಕುಮಾರ ರಾಠೊಡ, ನಾಮದೇವ ರಾಠೊಡ ಕರಹರಿ, ರಾಮಚಂದ್ರ ಜಾಧವ, ತಾರಾನಾಥ ಚವ್ಹಾಣ, ಸಂತೋಷ ಆಡೆ, ಬಿ.ಬಿ. ನಾಯಕ, ರಾಜು ಮಾನಸಿಂಗ ಚವ್ಹಾಣ, ಕೃಷ್ಣಕುಮಾರ ಜಾಧವ ಹಾಗೂ ಇತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next