ಕಲಬುರಗಿ: ಡಾ| ಸ್ವಾಮಿನಾಥನ್ ವರದಿ ಜಾರಿಗೊಳಿಸದ ಹಾಗೂ ರೈತರಿಗೆ ಪಿಂಚಣಿ ಘೋಷಿಸದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಸಿದ ಕೇಂದ್ರ ಬಜೆಟ್ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೃಷಿ ಬಿಕ್ಕಟ್ಟು ನಿವಾರಣೆ, ರೈತರ ಆತ್ಮಹತ್ಯೆ ತಡೆ, ರೈತರ ಆದಾಯ ಹೆಚ್ಚಳಕ್ಕೆ ಡಾ| ಸ್ವಾಮಿನಾಥನ್ ವರದಿ ಜಾರಿ, ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಹೆಚ್ಚುವರಿ ಲಾಭಾಂಶ ಸೇರಿಸಿ ಬೆಲೆ ನಿಗದಿಪಡಿಸಬೇಕೆಂಬ ಬೇಡಿಕೆ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ಬೇಳೆಕಾಳುಗಳ ಆಮದಿನಿಂದ ತೊಗರಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆಕಾಳುಗಳ ಮೇಲಿನ ಆಮದು ಸುಂಕ ವಿಧಿಸದೇ ಕೇಂದ್ರ ರೈತರಿಗೆ ಅನ್ಯಾಯ ಮಾಡಿದೆ. ರೈತರಿಗೆ ಉತ್ಪಾದನಾ ವೆಚ್ಚ ಹೆಚ್ಚಾಗಿ ಆದಾಯ ಕಡಿಮೆಯಾಗಿ ಸಾಲಗಾರರಾಗುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಬೇಕಿತ್ತು. ಆದರೆ ಕೇಂದ್ರ ಸಾಲ ಮನ್ನಾ ಘೋಷಣೆ ಮಾಡಿಲ್ಲ ಎಂದರು.
ಕೇಂದ್ರದ ಬಜೆಟ್‌ನಲ್ಲಿ ರೈತರಿಗೆ ದಿನಕ್ಕೆ 16.50 ರಂತೆ ಭಿಕ್ಷೆ ನೀಡಲಾಗುತ್ತಿರುವುದು ಸರಿಯಲ್ಲ. ಕೃಷಿ ಕೂಲಿಕಾರರು ಪಿಂಚಣಿ ನಿರೀಕ್ಷೆಯಲ್ಲಿದ್ದರು. 60 ವರ್ಷ ದಾಟಿದ ರೈತ ಕೂಲಿಕಾರರು 5 ಸಾವಿರ ರೂ. ಪಿಂಚಣಿ ಕೇಳಿದ್ದರು. ಅಸಂಘಟಿತ ವಲಯದ ಕಾರ್ಮಿಕರಿಗೆ ತಿಂಗಳಿಗೆ 100 ರೂ. ಕಟ್ಟಿಸಿಕೊಂಡು 32 ವರ್ಷದ ನಂತರ 3000 ರೂ ಪಿಂಚಣಿ ಘೋಷಿಸಿದ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಲಾಲಿಪಾಪ್ ನೀಡಿದೆ ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಶೋಕ ಮ್ಯಾಗೇರಿ, ಸುಭಾಷ ಹೊಸ್ಮನಿ, ಮಲ್ಲಣ್ಣಗೌಡ ಬನ್ನೂರ, ಶಾಂತಪ್ಪ ಪಾಟೀಲ, ಪಾಂಡುರಂಗ ಮಾವಿನಕರ, ಸಿದ್ದಯ್ಯ ಸ್ವಾಮಿ, ಗೌರಮ್ಮಾ ಪಾಟೀಲ ಹಾಗೂ ಇತರರಿದ್ದರು.