ಮದ್ದೂರು: ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ ತಾಲೂಕು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳು ತಾಲೂಕು ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ. ಗೀತಾ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿಮಂದಿರದ ಬಳಿ ಜಮಾವಣೆಗೊಂಡ ಸಂಘಟನೆಯ ಪದಾಧಿಕಾರಿಗಳು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ದೇಶಹಳ್ಳಿ ಗ್ರಾಮದ ಪರಿಶಿಷ್ಠ ಜಾತಿ/ ಪಂಗಡದ ಕಾಲೋನಿಯಲ್ಲಿ ಹಾಗೂ ಕುರುಬರದೊಡ್ಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಿ ಮಾತನಾಡುವ ವೇಳೆ ದಲಿತ ಮಹಿಳೆಯರನ್ನು ಕುರಿತು ನೀಡಿರುವ ಅವಹೇಳನಾಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಆಗ್ರಹಿಸಿದರು. ಅಸಭ್ಯ ಹಾಗೂ ಅಶ್ಲೀಲವಾಗಿ ಮಾತನಾಡುವ ಜತೆಗೆ ಸಂವಿಧಾನದ ವಿರೋಧಿ ನೀತಿಯನ್ನು ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರುದ್ಧವಾಗಿ ಮಾತನಾಡುವ ಮೂಲಕ ಪ್ರಜೆಗಳನ್ನು ಹಗುರವಾಗಿ ಕಂಡಿರುವ ಕ್ರಮ ಸರಿಯಲ್ಲವೆಂದರು.
ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ತಪ್ಪಿದಲ್ಲಿ ರಾಜ್ಯಾದ್ಯಂತ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆ ವೇಳೆ ಜಿಪಂ ಮಾಜಿ ಸದಸ್ಯ ಹೊಂಬಯ್ಯ, ಮನ್‌ಮುಲ್ ಮಾಜಿ ನಿರ್ದೇಶಕ ಕುಮಾರಕೊಪ್ಪ, ಅಂದಾನಿ ಸೋಮಹಳ್ಳಿ, ರವಿಕುಮಾರ್, ಡಿ.ಕೆ. ಕೃಷ್ಣ, ಕಬ್ಟಾಳಯ್ಯ, ಸತ್ಯಪ್ಪ, ದೊರೆ, ಅಂಬರೀಷ್, ರಾಜಣ್ಣ, ಶಿವು, ಕೃಷ್ಣಪ್ಪ ನೇತೃತ್ವವಹಿಸಿದ್ದರು.