ಕೊಪ್ಪಳ: ತಾಲೂಕಿನ ಹಿರೇಸಿಂದೋಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸೋಮರಡ್ಡಿ ಡಂಬ್ರಳ್ಳಿ ಅವರನ್ನು ವರ್ಗಾವಣೆ ಮಾಡಿದ್ದನ್ನುವಿರೋಧಿಸಿ ವಿದ್ಯಾರ್ಥಿಗಳು ಮಂಗಳವಾರ ಶಾಲಾ ಮೈದಾನದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಶಿಕ್ಷಕ ಸೋಮರಡ್ಡಿ ಅವರು ನಮಗೆ ಉತ್ತಮ ಪಾಠ ಮಾಡುತ್ತಾರೆ. ಕಳೆದ 16 ವರ್ಷಗಳಿಂದ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ತಿದ್ದಿ ಬುದ್ದಿ ಹೇಳಿ ಭವಿಷ್ಯ ರೂಪಿಸುತ್ತಿದ್ದಾರೆ. ಅವರನ್ನು ಹೆಚ್ಚುವರಿ ಪಟ್ಟಿಯಲ್ಲಿ ತೋರಿಸಿ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆದಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗಲಿದೆ. ಕೂಡಲೇ ಅವರನ್ನು ಇದೇ ಶಾಲೆಯಲ್ಲಿ ಮುಂದುವರಿಸಬೇಕು ಎಂದು ವಿದ್ಯಾರ್ಥಿಗಳೇ ಶಾಲಾ ಆವರಣದಲ್ಲಿ ಧರಣಿ ಕುಳಿತು ತಮ್ಮ ಅಸಮಾಧಾನ ಹೊರ ಹಾಕಿದರು.
ಶಿಕ್ಷಕ ಸೋಮರಡ್ಡಿ ಕನ್ನಡ ಬೋಧನೆ ಮಾಡುತ್ತಿದ್ದಾರೆ. ಅವರ ಬೋಧನೆಯಿಂದ ಇಲ್ಲಿ ನೂರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡಿದ್ದಾರೆ. ಕನ್ನಡದಲ್ಲಿ 10ನೇ ತರಗತಿಯಲ್ಲಿ 125ಕ್ಕೆ 125 ಅಂಕ ಪಡೆದಿದ್ದಾರೆ. ಹಲವು ವಿದ್ಯಾರ್ಥಿಗಳು ಇಂದಿಗೂ ನೆನೆಯುತ್ತಾರೆ. ಅಂತಹ ಶಿಕ್ಷಕರನ್ನು ಏಕಾಏಕಿ ಹೆಚ್ಚುವರಿ ಪಟ್ಟಿಯಲ್ಲಿ ತೋರಿಸಿ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಕೊಠಡಿಯೊಳಗೆ ಪ್ರವೇಶ ಮಾಡದೇ ಬಾಗಿಲಲ್ಲೇ ತಮ್ಮ ಬ್ಯಾಗ್ ಇಟ್ಟು ಪ್ರತಿಭಟನಾ ಧರಣಿ ನಡೆಸಿದರು. ವಿದ್ಯಾರ್ಥಿಗಳು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ವಿಷಯ ಸಂಪನ್ಮೂಲ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಮನವಿ ಆಲಿಸಿದರು. ಅಲ್ಲದೇ,
ಗ್ರಾಮಸ್ಥರೂ ಶಿಕ್ಷಕನ್ನು ವರ್ಗಾವಣೆ ಮಾಡುವುದು ತರವಲ್ಲ. ಅವರನ್ನೇ ಶಾಲೆಯಲ್ಲಿ ಮುಂದುವರಿಸಬೇಕು. ಅಲ್ಲದೇ, ಈ ಕಾರಣದಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಒತ್ತಡ ತರಬಾರದು. ಒಂದು ವೇಳೆ ವರ್ಗಾವಣೆ ಮಾಡಲೇಬೇಕು ಎಂದಿದ್ದರೆ ಅವರ ಸ್ಥಾನಕ್ಕೆ ಮತ್ತೋರ್ವ ಶಿಕ್ಷಕನ್ನು ನೇಮಕ ಮಾಡಿದ ಬಳಿಕವಷ್ಟೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಅಧಿಕಾರಿ ತಂಡಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಧರಣಿ ಅಲ್ಲಿಗೆ ಶಾಂತವಾಯಿತು. ಅಧಿಕಾರಿಗಳು ಡಿಡಿಪಿಐ ಅವರ ಮುಂದೆ ಈ ವಿಷಯ ಪ್ರಸ್ತಾಪಿಸಿ ಮುಂದಿನ ಕ್ರಮ ವಹಿಸುವ ಕುರಿತು ಗ್ರಾಮಸ್ಥರಿಗೆ ಭರವಸೆ ನೀಡಿದರು.