ಜೋಯಿಡಾ: ರಾಮನಗರದಲ್ಲಿ ನಡೆಯುತ್ತಿರುವ ಕಲ್ಲುಕ್ವಾರಿ ನಿಯಮಮೀರಿದ ಬ್ಲಾಸ್ಟಿಂಗ್ ವಿರುದ್ಧ ಸಿಡಿದೆದ್ದ ರಾಮನಗರ ಗ್ರಾಮಸ್ಥರು ಗ್ರಾಪಂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆದಿದೆ.
ರಾಮನಗರ ನಿರಾಶ್ರಿತರ ಜಾಗೆಯಲ್ಲಿ ಕ್ವಾರಿ ನಡೆಸುತ್ತಿರುವ ಮಾಲಿಕರು ನಿಯಮಬಾಹಿರವಾಗಿ ಬ್ಲಾಸ್ಟಿಂಗ್ ಮಾಡುವ ಮೂಲಕ ಸುತ್ತಲ ನಾಗರಿಕರಿಗೆ ಭಯದ ವಾತಾವರಣ ಸೃಷ್ಟಿಸಿದ್ದರು. ಇದರಿಂದ ಪರಿಸರ ಕಲುಷಿತಗೊಂಡಿದ್ದು, ಶಾಲಾ ಮಕ್ಕಳು, ನಾಗರಿಕರು ರೋಗಗ್ರಸ್ಥರಾಗುತ್ತಿದ್ದು, ನಾಗರಿಕರ ಬದುಕು ದುಸ್ಥರವಾಗಿದೆ ಎಂದು ಆರೋಪಿಸಿದ್ದಾರೆ.ತಮಗಾದ ತೊಂದರೆಗೆ ಸಿಡಿದೆದ್ದ ಸುಮಾರು 500ಕ್ಕೂ ಹೆಚ್ಚು ಸಾರ್ವಜನಿಕರು, ಗ್ರಾಪಂಗೆ ಮುತ್ತಿಗೆ ಹಾಕಿ, ಕ್ವಾರಿ ಬಂದ್ ಮಾಡುವಂತೆ ಆಗ್ರಹಿಸಿದ್ದರು.
ಕೂಡಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರು ಕ್ವಾರಿ ಮಾಲಿಕರನ್ನು ಪಂಚಾಯತ್‌ಗೆ ಕರೆಸಿ ಸಾರ್ವಜನಿಕರ ಸಮಕ್ಷಮ ಕ್ವಾರಿ ಬ್ಲಾಸ್ಟಿಂಗ್ ಮುಂದಿನ ಆದೇಶ ಬರುವಲ್ಲಿಯ ವರೆಗೆ ಬಂದ್‌ಮಾಡುವಂತೆ ಆದೇಶಿಸಿದರು. ಇದಕ್ಕೆ ಲಿಖೀತ ಭರವಸೆ ನೀಡಿದ ಅಧಿಕಾರಿಗಳು ಹಾಗೂ ಕ್ವಾರಿ ಮಾಲಿಕರ ಒಪ್ಪಿಗೆಗೆ ಸಾರ್ವಜನಿಕರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಬ್ಲಾಸ್ಟಿಂಗ್‌ಗೆ ಮನೆ ಬಿರುಕು: ಕ್ವಾರಿಗಳಿಗೆ ಸರಕಾರದ ಭೂಗರ್ಭ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೀಡಿದ ಬ್ಲಾಸ್ಟಿಂಗ್ ನಿಯಮವನ್ನು ಗಾಳಿಗೆ ತೂರಿ ಬೃಹತ್ ಪ್ರಮಾಣದ ಬ್ಲಾಸ್ಟಿಂಗ್ ಮಾಡುವ ಮೂಲಕ ಸುತ್ತಲ ಮನೆಗಳು ಬಿರುಕು ಬಿಟ್ಟಿದ್ದು, ಬ್ಲಾಸ್ಟಿಂಗ್ ನಡೆಯುವಾಗ ಮನೆಗಳು ನಡುಗುತ್ತಿವೆ. ಆರ್‌ಸಿಸಿ ಮನೆಗಳು ಕೂಡಾ ಬಿರುಕು ಬಿಟ್ಟಿದ್ದು ಮನೆಯಲ್ಲಿ ವಾಸಿಸಲು ಹೆದರಿಕೆ ಯಾಗುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಜೀವಭಯದಲ್ಲಿ ಕುಟುಂಬಗಳು: ಬ್ಲಾಸ್ಟಿಂಗ್ ಅಬ್ಬರಕ್ಕೆ ಮನೆಗಳು ನಡುಗುತ್ತಿದ್ದು, ಒಡೆದ ಮನೆಯಲ್ಲಿ ಜೀವಕೈಯಲ್ಲಿ ಹಿಡಿದು ಜನರು ವಾಸಿಸುತ್ತಿದ್ದಾರೆ. ತಾಲೂಕಾ ಆಡಳಿತಕ್ಕೆ ಈ ಬಗೆ ಅನೇಕ ಸಆರಿ ಮನವಿ ಮಾಡಿದರೂಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಸಂಬಂಧಿಸಿದ ಪರಿಸರ ಮತ್ತು ಆರೋಗ್ಯ ಇಲಾಖೆಗೆ ಈ ಬಗ್ಗೆ ಮನವಿ ಸಲ್ಲಿಸಿರುವ ಸಾರ್ವಜನಿಕರು,ಮುಂದಿನ ದಿನದಲ್ಲಿ ಬ್ಲಾಸ್ಟಿಂಗ್ ಬಂದ್ ಮಾಡುವ ಮೂಲಕ ಜನಸಾಮಾನ್ಯರಿಗಾದ ನಷ್ಟಕ್ಕೆ ಪರಿಹಾರ ನೀಡಬೇಕು. ಅಕ್ರಮ ಕ್ವಾರಿಯನ್ನು ಕೂಡಲೆ ಬಂದ್ ಮಾಡುವಮೂಲಕ ಪರಿಸರ ಮತ್ತು ಸಾರ್ವಜನಿಕರಿಗೆ ಆಗುವ ಅನಾರೋಗ್ಯ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಮುಖ ರಾದ ಪ್ರಭಾಕರ ಗಾವಡೆ, ಮಾರೂತ ಪಾಟಿಲ, ಶ್ರೀಕುಂಬಾರ, ಬಂಗಾರಪ್ಪಾ ಗಾವಡೆ, ಮುಂತಾದವರು ಉಪಸ್ಥಿತರಿದ್ದರು.