Advertisement

ಕಲ್ಲು ಗಣಿಗಾರಿಕೆ ನಿಲ್ಲಿಸಲು ಅಹೋರಾತ್ರಿ ಧರಣಿ

05:44 PM Apr 10, 2022 | Team Udayavani |

ಪಾಂಡವಪುರ: ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಕನಗನಮರಡಿ ಗ್ರಾಮಸ್ಥರು ಕ್ರಷರ್‌ ಬಳಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನಾ ಧರಣಿ 5ನೇ ದಿನವಾದ ಶನಿವಾರವೂ ಮುಂದುವರಿದು ಭಾನುವಾರ 6ನೇ ದಿನಕ್ಕೆ ಕಾಲಿಟ್ಟಿದೆ.

Advertisement

ಕನಗನಮರಡಿ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸಬೇಕು, ಕಲ್ಲು ಗಣಿಗಾರಿಕೆಯಿಂದ ಕಗನಗನಮರಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಗಣಿಶಬ್ಧಕ್ಕೆ ಮನೆ, ದೇವಸ್ಥಾನ, ವಿಸಿ ನಾಲೆಯ ಅಕ್ವಡೆಟ್‌ ಬಿರುಕು ಬಿಡುತ್ತಿವೆ. ಜತೆಗೆ ಕಲ್ಲಿನ ದೂಳಿನಿಂದಾಗಿ ಸುತ್ತಮುತ್ತಲಿನ ಕೃಷಿ ಪ್ರದೇಶದಲ್ಲಿ ಬೆಳೆ ಬೆಳೆಯಲು ಅಸಾಧ್ಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಮಸ್ಯೆ ಆಲಿಸಿಲ್ಲ: ಕಲ್ಲಿನ ದೂಳು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾತ್ರಿ ವೇಳೆ ಮನೆಗಳಲ್ಲಿ ಮಕ್ಕಳು, ವಯೋವೃದ್ಧರು ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್‌ ಇರುವ ಸ್ಥಳದಲ್ಲಿಯೇ ಅಹೋರಾತ್ರಿ ಪ್ರತಿಭಟನೆ ಧರಣಿ ನಡೆಸುತ್ತಿದ್ದಾರೆ. ಅಹೋರಾತ್ರಿ ಪ್ರತಿಭಟನೆಯೂ ಶನಿವಾರಕ್ಕೆ 5ನೇ ದಿನಕ್ಕೆ ಕಾಲಿಟ್ಟರೂ ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.

ಎಚ್ಚರಿಸುವ ಕೆಲಸ: ಕನಗನಮರಡಿ ಗ್ರಾಮಸ್ಥರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಕಾಂಗ್ರೆಸ್‌ ಮುಖಂಡ ಡಾ.ಎಚ್‌. ಎನ್‌.ರವೀಂದ್ರ ಅವರು ಸಾಥ್‌ ನೀಡುತ್ತಿದ್ದಾರೆ. ಐದು ದಿನಗಳ ಅಹೋರಾತ್ರಿ ಪ್ರತಿಭಟನೆಗಳಲ್ಲೂ ಪಾಲ್ಗೊಂಡು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಮಾತನಾಡಿ, ಕನಗನಮರಡಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಚಾಲ್ತಿಯಲ್ಲಿ ಇರುವ ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಕನಗನಮರಡಿ ಗ್ರಾಮಸ್ಥರು ನಡೆಸುತ್ತಿರುವ ಅಹೋರಾತ್ರಿ ಧರಣಿ ಶನಿವಾರಕ್ಕೆ 5ನೇ ದಿನವಾಗಿದೆ. ಇಲ್ಲಿಯವರೆಗೂ ಸಾಕಷ್ಟು ಬೆಳೆವಣಿ ನಡೆಯುತ್ತಿದ್ದು, ಇನ್ನೂ ತ್ವರಿತವಾಗಿ ಹೆಚ್ಚಿನ ಬೆಳವಣಿಗೆ ನಡೆದು ಗಣಿಗಾರಿಕೆ ಸ್ಥಗಿತಗೊಳಿಸಬೇಕಾಗಿದೆ ಎಂದು ಒತ್ತಾಯಿಸಿದರು. ಅಲ್ಲದೇ, ಇಲ್ಲಿ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎನ್ನುವ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆಯೇ ಹೊರತು ಬೂಟಾಟಿಕೆಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಗೋಸೇಗೌಡ, ಸ್ವಾಮೀಗೌಡ, ಸುರೇಂದ್ರಕುಮಾರ್‌, ಜಯರಾಮೇಗೌಡ, ಚನ್ನಕೇಶವ, ಉಮೇಶ್‌, ಚಂದ್ರು, ಶಿವಕುಮಾರ್‌ ಮತ್ತಿತರರಿದ್ದರು.

Advertisement

ತಹಶೀಲ್ದಾರ್‌ರಿಗೆ ಸೂಕ್ತ ದಾಖಲೆ : ಆರಂಭದಿಂದ ಗಣಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಬಂದು ವರದಿ ತಯಾರಿಸಿ ಹೋಗಿದ್ದಾರೆ. ಶುಕ್ರವಾರ ಪಾಂಡವಪುರ ತಹಶೀಲ್ದಾರ್‌ ನಯನಾ ಅವರು ಆಗಮಿಸಿ ನಮ್ಮ ಸಮಸ್ಯೆ ಆಲಿಸಿದ್ದಾರೆ. ನಾವೂ ತಹಶೀಲ್ದಾರ್‌ ಅವರಿಗೆ ಸೂಕ್ತದಾಖಲೆ ನೀಡಿದ್ದೇವೆ. ಗಣಿಗಾರಿಕೆ ಪ್ರದೇಶದ 5 ಕಿ.ಮೀ. ಒಳಗೆ ವಿ.ಸಿ. ನಾಲೆ ಅಕ್ವಟೆಡ್‌ ಇದೆ. ಜತೆಗೆ ಹುಲಿಕೆರೆ ಟನಲ್‌(ಸುರಂಗ) ಸೇರಿ ಹಲವು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಶೀಘ್ರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್‌ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಸೋಮವಾರ ಅಥವಾ ಮಂಗಳವಾರ ದೊಳಗಾಗಿ ಸೂಕ್ತ ಕ್ರಮವಹಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಎನ್‌.ರವೀಂದ್ರ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next