ರಾಮನಗರ: ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಘಟನೆಗೆ ಕಾರಣರಾಗಿರುವ ಶಾಸಕ ಸಾ.ರಾ.ಮಹೇಶ್ ಸಹೋದರರನ್ನು ಬಂಧಿಸಬೇಕು, ಸಾ.ರಾ. ಮಹೇಶ್ ತಮ್ಮಶಾಸಕ ಸ್ಥಾನಕ್ಕೆ ರಾಜೀನಾಮೆ ಆಗ್ರಹಿಸಿ ಸಮತಾ ಸೈನಿಕ ದಳದ ಮತ್ತು ವಿವಿಧ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸಾ.ರಾ.ಮಹೇಶ್ ಮತ್ತು ಅವರ ಸಹೋದರರ ವಿರುದ್ಧ ದಿಕ್ಕಾರ ಕೂಗಿದರು. ಕೆಲಕಾಲ ಹೆದ್ದಾರಿ ತಡೆ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಉಗ್ರ ಹೋರಾಟ: ಈ ವೇಳೆ ಮಾತನಾಡಿದ ದಲಿತ ಮುಖಂಡ ಶಿವಕುಮಾರಸ್ವಾಮಿ, ದಲಿತರ ಮೇಲೆ ನಿರಂತರ ದೌರ್ಜನ್ಯ, ಹಲ್ಲೆ, ದಬ್ಟಾಳಿಕೆ ನಡೆ ಯುತ್ತಲೇ ಇವೆ. ಅಮಾಯಕರನ್ನು ಕಾಡುತ್ತಿರುವವನ್ನು ಸಹ ಗುಂಡಿಟ್ಟು ಕೊಲ್ಲಬೇಕಾಗಿದೆ. ಉಳ್ಳವರಿಂದಲೇ ಇಂದು ದೌರ್ಜನ್ಯಗಳು ನಡೆಯುತ್ತಿವೆ. ಇಂದು ನಡೆಸುತ್ತಿರುವುದು ಸಾಂಕೇತಿಕ ಪ್ರತಿಭಟನೆ ನಡೆಸಲಾಗಿದೆ. ದೌರ್ಜನ್ಯಕ್ಕೆ ಕಾರಣರಾದವರನ್ನು ತಕ್ಷಣ ಬಂಧಿಸದಿದ್ದರೆ ಉಗ್ರಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಸಮತಾ ಸೈನಿಕ ದಳದ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ ಮಾತನಾಡಿ, ಮೈಸೂರು ಜಿಲ್ಲೆಯ ಸಾಲಿಗ್ರಾಮವೆಂಬಲ್ಲಿ ದಲಿತರ ಕಾಲೋನಿಗೆ ನುಗ್ಗಿ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಸಹಚರರ ಗುಂಪು ದಲಿತರ ಮೇಲೆ ಗುಂಡಾಗಿರಿ, ದುರ್ವರ್ತನೆ, ದಬ್ಟಾಳಿಕೆ, ಹಾಗೂ ದೌರ್ಜನ್ಯ ವೆಸಗಿದೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾ.ರಾ.ಮಹೇಶ್ ಅವರ ಸಹೋದರ ಸಾ.ರಾ. ರವೀಶ್ ಹಾಗೂ ಸಹಚರರಿಗೆ ಮಹೇಶ್ ಅವರೇ ಕುಮ್ಮಕ್ಕು ನೀಡಿರುವ ಕಾರಣ ಈ ಘಟನೆ ಜರುಗಿದೆ. ಸರ್ಕಾರ ಇದರ ಬಗ್ಗೆ ಸಮಗ್ರ ಹಾಗೂ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ನಿರ್ದಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ತವ್ಯ ಲೋಪ: 2019ರಲ್ಲಿ ಸರ್ವೋತ್ಛ ನ್ಯಾಯಾಲಯ ದಲಿತರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳನ್ನು ದೂರು ದಾಖಲಾದ 24 ಗಂಟೆಯೊಳಗೆ ಕೋರ್ಟ್‌ಗೆ ಒಪ್ಪಿಸಬೇಕೆಂಬ ನಿರ್ದೇಶನ ನೀಡಿದೆ. ಸಾಲಿಗ್ರಾಮದಲ್ಲಿ ನಡೆದಿರುವ ಘಟನೆಯಲ್ಲಿ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಈ ಕೂಡಲೇ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಯನ್ನು ಕೂಡಲೇ ಅಮಾನತ್ತು ಪಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದಚಲುವರಾಜು, ಗುರುಮೂರ್ತಿ, ಚಂದ್ರು ಪದಾಧಿಕಾರಿಗಳಾದ ಬನಶಂಕರಿ ನಾಗು, ಶಿವರಾಜ್ ಭರಣಿ, ಜಗದೀಶ, ರುದ್ರೇಶ್, ಕೋಟೆ ಪ್ರಕಾಶ್, ನರೇಶ್, ಲಕ್ಷ್ಮಣ… ಪುಟ್ಟಸ್ವಾಮಿ, ಮಹಲಿಂಗ ವಿ.ಎಸ್.ದೊಡ್ಡಿ, ವೆಂಕಟೇಶ್, ಗೋವಿಂದರಾಜು, ಹೇಮಂತ್ ಬೈರಮಂಗಲ, ಚಕ್ಕೇರೆ ಲೋಕೇಶ್, ಹೊಂಬಾಳಯ್ಯ, ಗುಂಡಾ ದೇವರಹಳ್ಳಿ ಇದ್ದರು.