ಹುಬ್ಬಳ್ಳಿ: ಚನ್ನಮ್ಮ ವೃತ್ತದಲ್ಲಿ
ಫ್ಲೈ ಓವರ್ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಆಸ್ತಿ ಹರಾಜು ಮಾಡುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ನವನಗರದ ಪಾಲಿಕೆ 4ನೇ ವಲಯ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಹಾಗೂ ಪಾಲಿಕೆ ಆಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಸ್ಥಳೀಯ ಪಾಲಿಕೆ ಆಸ್ತಿ ಮಾರುವುದು ಎಷ್ಟು ಸೂಕ್ತ. ಇದಕ್ಕಾಗಿ ಕೇಂದ್ರ-ರಾಜ್ಯ ಸರಕಾರಗಳಿಂದ ಅನುದಾನ ಪಡೆದು ನಿರ್ಮಿಸಬೇಕು. ಆಸ್ತಿ ಮಾರಾಟದಿಂದ ಬರುವ ಹಣವನ್ನು ಸ್ಥಳೀಯ ಅಭಿವೃದ್ಧಿಗೆ ಬಳಸಬೇಕು. ಕೂಡಲೇ ಆಸ್ತಿ ಹರಾಜು ಕೈಬಿಡಬೇಕೆಂದು ಒತ್ತಾಯಿಸಿದರು.
ನಾಗರಾಜ ಗೌರಿ ಮಾತನಾಡಿ, ಆರ್ಥಿಕ ಸಂಕಷ್ಟ ಇರುವಾಗ ಚನ್ನಮ್ಮ ವೃತ್ತದಲ್ಲಿ
ಫ್ಲೈ ಓವರ್ ನಿರ್ಮಿಸುವುದು ಅಗತ್ಯವಿರಲಿಲ್ಲ. ಅರ್ಧ ರಿಂಗ್ ರೋಡ್ ಪೂರ್ಣಗೊಳ್ಳುವ ಹಂತದಲ್ಲಿದ್ದು, ಸಂಚಾರ ದಟ್ಟಣೆ ಸಾಕಷ್ಟು ಕಡಿಮೆಯಾಗಲಿದೆ. ಅಭಿವೃದ್ಧಿ ನೆಪದಲ್ಲಿ ಸ್ಥಳೀಯ ಸಂಸ್ಥೆಗಳ ಆಸ್ತಿ ಹರಾಜಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದಕ್ಕಾಗಿ ನವನಗರದಲ್ಲಿ ಖಾಲಿ ಇರುವ ಪಾಲಿಕೆ ಒಡೆತನದ ಮೂಲೆ ನಿವೇಶನಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಪೌರ ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ 70 ಕೋಟಿ ನೀಡುವುದಾದರೂ ಹೇಗೆ? ಫ್ಲೈ ಓವರ್ ನೆಪದಲ್ಲಿ ಖಾಲಿ ನಿವೇಶನಗಳ ಮಾರಾಟದ ಹಿಂದೆ ದೊಡ್ಡ ಕುತಂತ್ರ ಅಡಗಿದ್ದು, ಪಾಲಿಕೆ ಸದಸ್ಯರ ಆಯ್ಕೆಯಾಗುವವರೆಗೂ ಯಾವುದೇ ಕಾರಣಕ್ಕೂ ಪಾಲಿಕೆ ಆಸ್ತಿ ಹರಾಜು ಹಾಕಬಾರದು ಎಂದರು.
ಪಾಲಿಕೆ ಮಾಜಿ ಸದಸ್ಯೆ ದೀಪಾ ಗೌರಿ ಮಾತನಾಡಿ, ಬಿಆರ್‌ಟಿಎಸ್ ಯೋಜನೆಯನ್ನು ಕೊಂಡಾಡಿದ್ದ ಸ್ಥಳೀಯ ಶಾಸಕರು ಅದನ್ನು ಸಾವಿನ ರಸ್ತೆ ಎಂದು ನಾಮಕರಣ ಮಾಡಿದ್ದಾರೆ. ಈಗ ಫ್ಲೈ ಓವರ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ತಮ್ಮ ಕ್ಷೇತ್ರದ ಪಾಲಿಕೆ ಆಸ್ತಿ ಮಾರಾಟ ಮಾಡಿಸಲು ಮುಂದಾಗಿದ್ದಾರೆ. ಸ್ಥಳೀಯರ ಸಲಹೆ ಸೂಚನೆ ಪಡೆಯದೆ 100ಕ್ಕೂ ಹೆಚ್ಚು ನಿವೇಶನಗಳನ್ನು ಹರಾಜು ಹಾಕಲು ಮುಂದಾಗಿರುವುದು ಸರಿಯಲ್ಲ ಎಂದರು.
ಇದನ್ನೂ ಓದಿ : ವಿನಯ್ ಕುಲಕರ್ಣಿ, ಚಂದ್ರಶೇಖರ ಇಂಡಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
ಪಾಲಿಕೆ ಮಾಜಿ ಸದಸ್ಯ ಕರಿಯಪ್ಪ ಬಿಸಗಲ್ಲ, ಮುಖಂಡರಾದ ಬಸವರಾಜ ಬಿಸನಳ್ಳಿ, ಷಣ್ಮುಖ ಬೆಟಗೇರಿ, ಹನುಮಂತ ಕೊರವರ, ಸಿದ್ಧಾರೂಢ ಶಿಸನಳ್ಳಿ, ಸಂಜಯ ಗಿರಿಮಠ, ಕಂಚನಾ ಘಾಟಗೆ, ಚೇತನಾ, ಜ್ಯೋತಿ ವಾಲೀಕರ, ಅಕ್ಕಮ್ಮ ಕಂಬಳಿ, ಲಕ್ಷ್ಮೀ, ಪಿ.ಎಂ.ಸವದತ್ತಿ ಇನ್ನಿತರರಿದ್ದರು.