ಕಾರವಾರ: ಇಲ್ಲಿನ ಸರ್ವಋತು ಬಂದರು ಎರಡನೇ ಹಂತದ ವಿಸ್ತರಣೆಗೆ ಕೇಂದ್ರ ಸರ್ಕಾರ ರೂಪಿಸಿ ಜಾರಿ ಮಾಡುತ್ತಿರುವ ಸಾಗರ ಮಾಲಾ ಯೋಜನೆ ವಿರೋಧಿಸಿ ಸಾವಿರಾರು ಮೀನುಗಾರರು ಕಡಲತೀರದಲ್ಲಿ ಪ್ರತಿಭಟನೆ ನಡೆಸಿದರು. ಕಾರವಾರ ಬೀಚ್‌ನಲ್ಲಿ 125 ಕೋಟಿ ವೆಚ್ಚದ ಅಲೆತಡೆ ಗೋಡೆ ಕಾಮಗಾರಿಗೆ ಅಡ್ಡಿಪಡಿಸಿದರು.
ಕಾಮಗಾರಿಗೆ ಅಡ್ಡಿಪಡಿಸಿದ ಮೀನುಗಾರ ಮುಖಂಡರು ಹಾಗೂ ಯುವಕರು, ಮಹಿಳೆಯರನ್ನು ಪೊಲೀಸರು ಬಂಧಿಸಿ ಬಸ್‌ನಲ್ಲಿ ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ದರು. ಬೆಳಗಿನಿಂದ ಅಲೆತಡೆಗೋಡೆ ಕಾಮಗಾರಿ ಗುತ್ತಿಗೆ ಪಡೆದ ಏಜೆನ್ಸಿ ಪ್ರಾರಂಭಿಸಿತು. ಇದನ್ನು ಮೀನುಗಾರರು ಪ್ರತಿರೋಧಿಸುತ್ತಲೇ ಇದ್ದರು. ಪರಿಸರ ಇಲಾಖೆ ಅನುಮತಿ ಇಲ್ಲ. ಹಲವು ನಿಯಮಗಳನ್ನು ಉಲ್ಲಂಘಿಸಲಾಗಿದೆ. ಮೀನುಗಾರಿಕೆಗೆ ತೊಂದರೆಯಾಗಲಿದೆ. ಕಾರವಾರ ಕಡಲತೀರ ಪ್ರವಾಸಿಗರಿಗೆ ಮತ್ತು ಜನತೆಗೆ ಉಳಿಯುವುದಿಲ್ಲ. ಇದು ಅವೈಜ್ಞಾನಿಕ ಕಾಮಗಾರಿ ಎಂದು ಅಧಿಕಾರಿಗಳು ಹಾಗೂ ಪೊಲೀಸರ ಜತೆ ಮುಖಂಡರು ಹಾಗೂ ಯುವಕರು ವಾಗ್ವಾದಕ್ಕೆ ಇಳಿದರು.
ಬೆಳಗಿನ 11:29ರ ಹೊತ್ತಿಗೆ ಪರಿಸ್ಥಿತಿ ಕೈ ಮೀರುವ ಸುಳಿವು ಅರಿತ ಪೊಲೀಸರು ಪ್ರತಿಭಟನಾಕಾರರ ಬಂಧನಕ್ಕೆ ಎರಡು ಬಸ್ ತರಿಸಿದರು. ಆರಂಭದಲ್ಲಿ ಮುಖಂಡರಾದ ಗಣಪತಿ ಮಾಂಗ್ರೆ ಹಾಗೂ ರಾಜು ತಾಂಡೇಲ ಹಾಗೂ ಯುವಕರನ್ನು, ಮಹಿಳೆಯರನ್ನು ಬಂಧಿಸಲಾಯಿತು.
ಕಾಮಗಾರಿ ತಡೆಯಲು ಯುವಕರ ಪಡೆ ನುಗ್ಗುತ್ತಿದ್ದಂತೆ ಅವರನ್ನು ಸುತ್ತುವರಿದ ಪೊಲೀಸ ಪಡೆಗಳು, ಪ್ರತಿಭಟನಾಕಾರರನ್ನು ಬಂಧಿಸಿ, ಬಸ್‌ಗಳಿಗೆ ತುಂಬಿದರು. ಪ್ರತಿಭಟಿಸುತ್ತಲೇ ಬಸ್ ಏರಿದ ಮೀನುಗಾರರು ಸರ್ಕಾರದ ವಿರುದ್ಧ, ಅಧಿಕಾರಿಗಳ ವಿರುದ್ಧ ಕ್ಕಾರ ಕೂಗಿದರು. ಈ ವೇಳೆಗೆ ಎರಡು ಬಸ್‌ಗಳಲ್ಲಿ ತುಂಬಿದ್ದ ನೂರಕ್ಕೂ ಹೆಚ್ಚು ಜನರನ್ನು ಜಿಲ್ಲಾ ಪೊಲೀಸ್ ಪರೇಡ್ ಮೈದಾನಕ್ಕೆ ಕರೆತಂದು ಪೊಲೀಸ್ ಬ್ಯಾರೆಕ್‌ನಲ್ಲಿ ಇಡಲಾಯಿತು. ನಂತರ ಅವರ ಹೆಸರು ನಮೂದಿಸಿಕೊಂಡು ಬಿಡುಗಡೆ ಮಾಡಲಾಯಿತು. ಈ ವೇಳೆಗೆ ಎರಡು ತಾಸು ಕಳೆದಿತ್ತು. ಅಲೆ ತಡೆಗೋಡೆ ಕಾಮಗಾರಿಗೆ ಬುನಾದಿ ಹಾಕುವ ಕ್ರಿಯೆ ನಡೆದಿತ್ತು. ಇದನ್ನು ಸ್ಥಳದಲ್ಲಿದ್ದ ಮೀನುಗಾರರು ವಿರೋಧಿಸುತ್ತಲೇ ಇದ್ದರು. ಮಧ್ಯಾಹ್ನ ಊಟದ ವಿರಾಮದ ವೇಳೆಗೆ ಬಿಡುಗಡೆ ಹೊಂದಿದ್ದ ಮೀನುಗಾರರ ಮಹಿಳೆಯರು ಮತ್ತು ಯುವಕರು ಮತ್ತೆ ಕಾಮಗಾರಿ ತಡೆಯಲು ಪ್ರತಿಭಟನೆ ಆರಂಭಿಸಿದರು.
ಕಾಮಗಾರಿ ನಡೆವ ಸ್ಥಳಕ್ಕೆ ನುಗ್ಗಿದಾಗ ಘರ್ಷಣೆ ಉಂಟಾಯಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟು ಪೊಲೀಸರು ಕಾಮಗಾರಿ ನಡೆವ ಸ್ಥಳದಲ್ಲಿ ಕೋಟೆ ರಚಿಸಿದರು. ಇದನ್ನು ಪ್ರತಿಭಟಿಸಿದ ಈರ್ವರು ಮೀನುಗಾರ ಮಹಿಳೆಯರು, ಒಬ್ಬ ಯುವಕ ಸಮುದ್ರಕ್ಕೆ ಇಳಿದು ಅಸ್ವಸ್ಥರಾದರು. ತಕ್ಷಣ ಅವರನ್ನು ಅಂಬ್ಯುಲೆನ್ಸ್ ಮೂಲಕ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಕಾರವಾರ ಬೀಚ್‌ನಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು