Advertisement

ಗ್ರಾಮೀಣ ಅಂಚೆ ನೌಕರರ ಅಹೋರಾತ್ರಿ ಪ್ರತಿಭಟನೆ

12:08 PM Aug 22, 2017 | |

ಬೆಂಗಳೂರು: ಗ್ರಾಮೀಣ ಅಂಚೆ ಸೇವಕರಿಗೆ ಕಮಲೇಶ್ಚಂದ್ರ ವರದಿ ಪ್ರಕಾರವೇ ವೇತನ ಹಾಗೂ ಸೌಲಭ್ಯ ಒದಗಿಸಿ, ಸೇವೆಯನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿ ಅಖೀಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘವು ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಂಡಿದೆ. 

Advertisement

ಗ್ರಾಮೀಣ ಅಂಚೆ ನೌಕರರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ದೇಶಾದ್ಯಂತ ಪ್ರತಿಭಟನೆ ನಡೆಸುತಿದ್ದು, ಇದರ ಅಂಗವಾಗಿ ಕರ್ನಾಟಕ ಘಕಟದ ವತಿಯಿಂದಲೂ ನಗರ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ.

ಸಂಘದ ಪದಾಧಿಕಾರಿಗಳು ಕೇಂದ್ರ ಸಚಿವ ಅನಂತ್‌ಕುಮಾರ್‌ ಹಾಗೂ ರಾಜ್ಯ ಮುಖ್ಯಅಂಚೆ ಅಧಿಕಾರಿಯನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದರೂ, ಫ‌ಲಕಾರಿಯಾಗಿಲ್ಲ. ಹೀಗಾಗಿ ಸಮಸ್ಯೆ ಪರಿಹರಿಸುವವರೆಗೆ ತನಕವೂ ಫ್ರೀಡಂ ಪಾರ್ಕ್‌ನಲ್ಲೇ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಪೊಲೀಸರ ಭದ್ರತೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಅಂಚೆ ಇಲಾಖೆಯ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಯಂತೆ ಗ್ರಾಮೀಣ ಅಂಚೆ ನೌಕರರನ್ನು ಕೇಂದ್ರ ಸರ್ಕಾರದ ನೌಕರರೆಂದು ಪರಿಗಣಿಸಿ, 7ನೇ ವೇತನ ಆಯೋಗ ಪ್ರಕಾರವೇ ಮಾಸಿಕ ವೇತನ ನೀಡಬೇಕು. ದಿನಕ್ಕೆ 8 ಗಂಟೆ ದುಡಿಸಿಕೊಂಡು, ಮೂರು ಗಂಟೆಯ ಸಂಬಳ ನೀಡುತ್ತಿದ್ದಾರೆ.

ಸೇವಾಜೇಷ್ಠತೆಯ ಆಧಾರದಲ್ಲಿ ಬಡ್ತಿಯೂ ನೀಡುತ್ತಿಲ್ಲ, ವೇತನವನ್ನು ಹೆಚ್ಚಳ ಮಾಡುತ್ತಿಲ್ಲ. ಗ್ರಾಮೀಣ ಅಂಚೆ ನೌಕರರಿಗೆ ಸಂಬಂಧಿಸಿದಂತೆ ಕಮಲೇಶ್ಚಂದ್ರ ಅವರು ನೀಡಿರುವ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಹೋರಾಟ ಆರಂಭಿಸಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಎಸ್‌.ಎಸ್‌. ಮಹದೇವಯ್ಯ ತಿಳಿಸಿದರು.

Advertisement

ಕೇಂದ್ರ ಸರ್ಕಾರವು ಅಂಚೆ ನೌಕರರಿಗೆ ನೀಡುವಷ್ಟು ವೇತನವನ್ನೇ ಗ್ರಾಮೀಣ ಅಂಚೆ ನೌಕರರಿಗೂ ನೀಡಬೇಕು. ಅದರ ಜತೆಗೆ, ಇನ್ಸೂರೆನ್ಸ್‌, ಪೆನ್ಸನ್‌ ಸೌಲಭ್ಯದ ಜತೆಗೆ ಸೇವೆಯನ್ನು ಕಾಯಂ ಗೊಳಿಸಬೇಕು. ಇಲ್ಲವಾದರೆ, ರಾಜ್ಯದ 16 ಸಾವಿರ ಗ್ರಾಮೀಣ ಅಂಚೆ ನೌಕರರು ಸೇವೆಯನ್ನು ಸ್ಥಗಿತಗೊಳಿಸಲಿದ್ದಾರೆ ಎಂಬ ಎಚ್ಚರಿಕೆ ನೀಡಿದರು. ಸಂಘದ ಕಾರ್ಯದರ್ಶಿ ಕೆ.ಎಸ್‌. ರುದ್ರೇಶ್‌, ಸೇರಿದಂತೆ ಮೂರು ಸಾವಿರಕ್ಕೂ ಅಧಿಕ ನೌಕರರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next