Advertisement

ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

06:18 PM Jul 15, 2022 | Team Udayavani |

ರಾಯಚೂರು: ದಿನಬಳಕೆ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು, ಅಕ್ರಮಗಳಿಗೆ ಕಡಿವಾಣ ಹಾಕಬೇಕು, ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಚೇರಿ ಎದುರು ಎಸ್‌ಯುಸಿಐ(ಸಿ) ಕಾರ್ಯಕರ್ತರು ಪ್ರತಿಭಟಿಸಿದರು.

Advertisement

ಈ ಕುರಿತು ಜಿಲ್ಲಾ ಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರ ಅಡುಗೆ ಅನಿಲ ದರ 1200ಕ್ಕೆ ಹೆಚ್ಚಿಸಿದೆ. ಪೆಟ್ರೊಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿವೆ. ಇದರಿಂದ ಬಡ, ಮಧ್ಯಮ ವರ್ಗದ ಜನ ಬದುಕುವುದೇ ಕಷ್ಟವಾಗಿದೆ ಎಂದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಉದ್ಯಮಿಗಳಿಗೆ ಲಾಭ ಮಾಡಿಕೊಡುತ್ತಿದೆ. ಈಚೆಗೆ ರಾಜ್ಯದಲ್ಲಿ ಪಿಎಸ್‌ಐ, ಉಪನ್ಯಾಸಕರ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದ್ದು ಬಡ, ಮಧ್ಯಮ ವರ್ಗದ ಆಕಾಂಕ್ಷಿಗಳು ಭರವಸೆ ಕಳೆದುಕೊಂಡಿದ್ದಾರೆ ಎಂದು ದೂರಿದರು.

ಸಚಿವ ಈಶ್ವರಪ್ಪ ವಿರುದ್ಧ ಶೇ.40ರಷ್ಟು ಕಮಿಷನ್‌ ಆರೋಪ ಕೇಳಿಬಂದಿದ್ದು, ಗುತ್ತಿಗೆದಾರನ ಸಾವಿಗೆ ಕಾರಣವಾಗಿದೆ. ರಾಜ್ಯದಲ್ಲಿ ಯಾವ ಕೆಲಸಕ್ಕೂ ಲಂಚ ನೀಡುವ ಸ್ಥಿತಿ ಬಂದಿದೆ. ರಾಜ್ಯ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು, ಅಡುಗೆ ಅನಿಲ, ಇಂಧನ ದರ ಇಳಿಸಬೇಕು. ಅಕ್ಕಿ, ಜೋಳ, ಗೋಧಿ , ಸೀಮೆಎಣ್ಣೆ, ಬೇಳೆ ಕಾಳುಗಳನ್ನು ಪಡಿತರ ವ್ಯವಸ್ಥೆಯಲ್ಲಿ ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಡಾ| ಚಂದ್ರಗಿರೀಶ, ಸದಸ್ಯರಾದ ವೀರೇಶ ಎನ್‌.ಎಸ್‌, ಚನ್ನಬಸವ ಜಾನೆಕಲ್‌, ಮಹೇಶ ಚೀಕಲಪರ್ವಿ, ಹಯ್ನಾಳಪ್ಪ, ಮಲ್ಲನಗೌಡ, ಕಾರ್ತಿಕ್‌, ಮಹೇಶ ಪ್ರತಿಭಟನೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next